ವಯನಾಡ್ (ಕೇರಳ): ಇಲ್ಲಿನ ಮುಂಡಕೈ ಮತ್ತು ಚೂರಲ್‌ಮಲ ಭಾಗಗಳಲ್ಲಿ ಭೂಕುಸಿತ ಸಂಭವಿಸಿ ವರ್ಷ ಕಳೆದಿದ್ದು, ದುರಂತದಲ್ಲಿ ಅಸುನೀಗಿದವರ ಸ್ಮರಣೆಗಾಗಿ ಬುಧವಾರ ಪುತ್ತುಮಲ ಸ್ಮಶಾನದಲ್ಲಿ ಮೃತರ ಸಂಬಂಧಿಕರು ಸೇರಿದ್ದರು.
2024ರ ಜುಲೈ 29ರ ಮಧ್ಯರಾತ್ರಿ ಮತ್ತು 30ರಂದು ಸಂಭವಿಸಿದ ಭೀಕರ ಭೂಕುಸಿತದಲ್ಲಿ 264 ಜನರು ಜೀವಂತ ಸಮಾಧಿಯಾಗಿದ್ದರು. ಅವರ ಮೃತದೇಹಗಳನ್ನು ಅಂತ್ಯಸಂಸ್ಕಾರ ಮಾಡಿರುವ ಸ್ಮಶಾನಕ್ಕೆ ‘ಹೃದಯ ಭೂಮಿ’ ಎಂದು ಇಲ್ಲಿನ ಪಂಚಾಯಿತಿ ಹೆಸರಿಟ್ಟಿದೆ.
ಆ ಕರಾಳ ದಿನದಂದು ತಮ್ಮ ಸಂಬಂಧಿಕರು, ಬಂದುಗಳು ಮತ್ತು ಪ್ರೀತಿಪಾತ್ರರನ್ನು ಕಳೆದುಕೊಂಡ ನೂರಾರು ಜನ ‘ಹೃದಯ ಭೂಮಿ’ಯಲ್ಲಿ ಮೌನ ಆಚರಿಸಿದರು. ನೆರೆದಿದ್ದ ಕೆಲವರು ಆ ದಿನದ ನೆನಪುಗಳನ್ನು ಮೆಲುಕುಹಾಕಿದರೆ, ಇನ್ನು ಕೆಲವರು ತಮ್ಮ ಪ್ರೀತಿಪಾತ್ರರ ನೆನೆದು ಕಣ್ಣೀರು ಹಾಕಿದರು. ಮತ್ತೂ ಕೆಲವರು ಮೌನಕ್ಕೆ ಜಾರಿದ್ದರು.
‘ಆ ಕರಾಳ ದಿನವನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಬಯಸುವುದಿಲ್ಲ. ಆದರೆ ಏನು ಮಾಡುವುದು ಆ ನೆನಪುಗಳು ಕಾಡುತ್ತಿವೆ’ ಎಂದು ಅಲ್ಲಿನ ನಿವಾಸಿ ಮನೋಜ್ ಹೇಳಿದರು. ಅವರು ಈ ದುರಂತದಲ್ಲಿ ತಮ್ಮ 26 ಸಂಬಂಧಿಗಳನ್ನು ಕಳೆದುಕೊಂಡಿದ್ದಾರೆ.
ಮೆಪ್ಪಾಡಿಯಲ್ಲಿ ಸ್ಮರಣಾರ್ಥ ಕಾರ್ಯಕ್ರಮ ನಡೆಸಲಾಯಿತು. ರಾಜಕೀಯ ಮುಖಂಡರು ಮತ್ತು ಇತರ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು. ಬೆಳಿಗ್ಗೆ ಸರ್ವಧರ್ಮಗಳ ಪ್ರಾರ್ಥನಾ ಸಭೆಯೂ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.