ADVERTISEMENT

ಎಲ್ಲ ಧರ್ಮಗಳ ಸಂಪೂರ್ಣ ಗೌರವ ಮತ್ತು ಜಾಗತಿಕ ಸಾಮರಸ್ಯಕ್ಕೆ ಆಂಟೊನಿಯೊ ಗುಟೆರಸ್ ಕರೆ

ಪಿಟಿಐ
Published 30 ಜೂನ್ 2022, 7:20 IST
Last Updated 30 ಜೂನ್ 2022, 7:20 IST
ಆಂಟೊನಿಯೊ ಗುಟೆರಸ್
ಆಂಟೊನಿಯೊ ಗುಟೆರಸ್   

ವಿಶ್ವಸಂಸ್ಥೆ: ಎಲ್ಲ ಧರ್ಮಗಳಿಗೆ ಸಂಪೂರ್ಣ ಗೌರವ ಮತ್ತು ವಿವಿಧ ಸಮುದಾಯಗಳು ಜಾಗತಿಕವಾಗಿ ಸಾಮರಸ್ಯ ಮತ್ತು ಶಾಂತಿಯಿಂದ ಬದುಕುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್ ಕರೆ ನೀಡಿದ್ದಾರೆ ಎಂದು ಅವರ ವಕ್ತಾರ ಸ್ಟೀಫನ್ ಡುಜಾರಿಕ್ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಹತ್ಯೆ ಉದ್ದೇಶಿಸಿ ಹೇಳಿದ್ದಾರೆ.

ಕನ್ಹಯ್ಯ ಲಾಲ್ ಹತ್ಯೆಯ ನಂತರ ಭಾರತದಲ್ಲಿನ ಧಾರ್ಮಿಕ ಉದ್ವಿಗ್ನತೆಗಳ ಹೆಚ್ಚಳದ ಕುರಿತು ವಿಶ್ವಸಂಸ್ಥೆಯ ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆಯೇ ಎಂಬ ಪ್ರಶ್ನೆಗೆ ಡುಜಾರಿಕ್ ಉತ್ತರಿಸಿದರು.

ಟೈಲರ್ ಹತ್ಯೆಗೈದ ದುಷ್ಕರ್ಮಿಗಳನ್ನು ರಿಯಾಜ್ ಅಖ್ತಾರಿ ಮತ್ತು ಮೊಹಮ್ಮದ್ ಗೌಸ್ ಎಂದು ಗುರುತಿಸಲಾಗಿದೆ.

ADVERTISEMENT

‘ಎಲ್ಲ ಧರ್ಮಗಳ ಸಂಪೂರ್ಣ ಗೌರವಕ್ಕಾಗಿ ಮತ್ತು ಪ್ರಪಂಚದಾದ್ಯಂತ, ವಿವಿಧ ಸಮುದಾಯಗಳು ಸಾಮರಸ್ಯ ಮತ್ತು ಶಾಂತಿಯಿಂದ ಬದುಕಲು ನಾವು ಕರೆ ನೀಡುತ್ತೇವೆ’ಎಂದು ಡುಜಾರಿಕ್ ಬುಧವಾರ ಇಲ್ಲಿ ದೈನಂದಿನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಬಂಧನದ ಕುರಿತು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ನಾವು ನಂಬುತ್ತೇವೆ. ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಬಗ್ಗೆಯೂ ನಮಗೆ ನಂಬಿಕೆ ಇದೆ. ಜನರು ಇತರ ಸಮುದಾಯಗಳು ಮತ್ತು ಇತರ ಧರ್ಮಗಳನ್ನು ಗೌರವಿಸುವ ಮೂಲಭೂತ ಅಗತ್ಯವನ್ನು ಸಹ ನಾವು ನಂಬುತ್ತೇವೆ’ ಎಂದು ಹೇಳಿದರು.

ಹಿಂದೂ ದೇವತೆಯ ವಿರುದ್ಧ 2018 ರಲ್ಲಿ ಪೋಸ್ಟ್ ಮಾಡಿದ್ದ ‘ಆಕ್ಷೇಪಾರ್ಹ ಟ್ವೀಟ್’ಗಾಗಿ ಜುಬೈರ್ ಅವರನ್ನು ಸೋಮವಾರ ದೆಹಲಿ ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.