ADVERTISEMENT

‘ಟಿಆರ್‌ಪಿ ಹಗರಣದಲ್ಲಿ ರಿಪಬ್ಲಿಕ್ ಟಿವಿ, ಅರ್ನಬ್ ವಿರುದ್ಧ ಸಾಕ್ಷ್ಯ ಸಿಕ್ಕಿದೆ‘

ಪಿಟಿಐ
Published 6 ಜನವರಿ 2021, 12:22 IST
Last Updated 6 ಜನವರಿ 2021, 12:22 IST
ಅರ್ನಬ್ ಗೋಸ್ವಾಮಿ
ಅರ್ನಬ್ ಗೋಸ್ವಾಮಿ   

ಮುಂಬೈ: ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕೆಲವು ಪುರಾವೆ ಸಿಕ್ಕಿದೆ ಎಂದು ಬುಧವಾರ ಮುಂಬೈ ಪೊಲೀಸರು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಆದರೆ, ನ್ಯಾಯಾಲಯವು ಯಾವುದೇ ವಾದ ಆಲಿಸದೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದು, ಮುಂದಿನ ವಿಚಾರಣೆ ನಡೆಯಲಿರುವ ಜನವರಿ 15 ರವರೆಗೆ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹಿಂದಿನ ಹೇಳಿಕೆಯನ್ನು ಮುಂದುವರಿಸಲು ಪೊಲೀಸರು ಒಪ್ಪಿಕೊಂಡಿದ್ದಾರೆ.

ಕಳೆದ ವರ್ಷ, ಕೆಲವು ಟಿವಿ ಚಾನೆಲ್‌ಗಳು ತಮ್ಮ ಜಾಹೀರಾತು ಆದಾಯವನ್ನು ಹೆಚ್ಚಿಸಿಕೊಳ್ಳಲು ಟಿಆರ್‌ಪಿ ಸಂಖ್ಯೆಯನ್ನು ಅಡ್ಡದಾರಿಯಲ್ಲಿ ವೇಗವಾಗಿ ಹೆಚ್ಚಿಕೊಳ್ಳುತ್ತಿವೆ ಎಂದು ಆರೋಪಿಸಿ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ದೂರು ಸಲ್ಲಿಸಿತ್ತು ಆ ಬಳಿಕ ತನಿಖೆ ನಡೆದು ನಕಲಿ ಟಿಆರ್‌ಪಿ ಹಗರಣವನ್ನು ಪತ್ತೆ ಮಾಡಲಾಗಿತ್ತು.

ADVERTISEMENT

ಹಿರಿಯ ವಕೀಲ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮತ್ತೊಬ್ಬ ಹಿರಿಯ ವಕೀಲರು ಸಹ ಕುಟುಂಬದ ಗಂಭೀರ ಆರೋಗ್ಯ ಸಮಸ್ಯೆಯಲ್ಲಿ ಸಿಲುಕಿದ್ದು ನ್ಯಾಯಾಲಯಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ರಿಪಬ್ಲಿಕ್ ಟಿವಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪ್ರಕರಣದ ವಿಚಾರಣೆಯನ್ನು ಮುಂದೂಡಿಕೆ ಮಾಡಲಾಯ್ತು.

"ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿ ವಿರುದ್ಧ ಬಾರ್ಕ್ (ಬ್ರಾಡ್ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್) ದಾಖಲಿಸಿದ ಪ್ರಕರಣದ ತನಿಖೆಯಲ್ಲಿ ನಾವು (ಮುಂಬೈ ಪೊಲೀಸರು) ಸಾಕ್ಷ್ಯಗಳನ್ನು ಕಂಡುಕೊಂಡಿದ್ದೇವೆ. ಈ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬ ನಮ್ಮ ಹೇಳಿಕೆಯನ್ನು ಮುಂದುವರೆಸುತ್ತೇವೆ, ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾಗಿ ವಕೀಲ ಕಪಿಲ್ ಸಿಬಲ್ ಹೇಳಿದರು.

ಮುಂದಿನ ವಿಚಾರಣೆ ಸಂದರ್ಭ ಪೊಲೀಸರು ತಮ್ಮ ತನಿಖೆಯ ಪ್ರಗತಿ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದರು.

ಜನವರಿ 6 ರವರೆಗೆ ಗೋಸ್ವಾಮಿ ಅಥವಾ ರಿಪಬ್ಲಿಕ್ ಟಿವಿಯನ್ನು ನಡೆಸುತ್ತಿರುವ ಎಆರ್‌ಜಿ ಔಟ್‌ಲೈಯರ್ ಮೀಡಿಯಾ (ಎಒಎಂ)ದ ಯಾವುದೇ ನೌಕರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಂಬೈ ಪೊಲೀಸರ ಪರವಾಗಿ ವಕೀಲ ಸಿಬಲ್, ಕಳೆದ ವರ್ಷ ಡಿಸೆಂಬರ್ 16 ರಂದು ಹೈಕೋರ್ಟ್‌ಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.