ADVERTISEMENT

ಗಡಿಯಲ್ಲಿ ಚೀನಾ ಚಟುವಟಿಕೆ ಬಗ್ಗೆ ಎಚ್ಚರಿಸಲು ವಿದೇಶಿಯರ ಅಗತ್ಯ ಎದುರಾಗಿದೆ: ಒವೈಸಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜೂನ್ 2022, 5:50 IST
Last Updated 9 ಜೂನ್ 2022, 5:50 IST
ಅಸಾದುದ್ದೀನ್‌ ಒವೈಸಿ
ಅಸಾದುದ್ದೀನ್‌ ಒವೈಸಿ    

ನವದೆಹಲಿ: ಗಡಿಯಲ್ಲಿನ ಚೀನಾದ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ವಿದೇಶಿಯರು ಮನದಟ್ಟು ಮಾಡಿಕೊಡಬೇಕಾಗಿ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಎಐಎಂಐಎಂನ ನಾಯಕ ಅಸಾದುದ್ದೀನ್‌ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಲಡಾಖ್‌ಗೆ ಹೊಂದಿಕೊಂಡಿರುವ ತನ್ನ ಗಡಿಯಲ್ಲಿ ಚೀನಾ ರಕ್ಷಣಾ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಹಿಂದೂಮಹಾಸಾಗರ–ಪೆಸಿಫಿಕ್‌ ಪ್ರದೇಶವನ್ನು ಅಸ್ಥಿರಗೊಳಿಸಲು ಚೀನಾದ ಕಮ್ಯುನಿಸ್ಟ್ ಪಾರ್ಟಿ (ಸಿಸಿಪಿ) ಯತ್ನಿಸುತ್ತಿದೆ. ಗಡಿಯಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಿರುವ ಉದ್ದೇಶ ಏನು ಎಂದು ಚೀನಾವನ್ನು ಪ್ರಶ್ನಿಸಬೇಕಿದೆ’ ಎಂದು ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಸೇನೆಯ ಪೆಸಿಫಿಕ್ ಕಮಾಂಡ್‌ನ ಜನರಲ್ ಚಾರ್ಲ್ಸ್ ಎ.ಫ್ಲಿನ್‌ ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ ಮಾಡಿರುವ ಅಸಾದುದ್ದೀನ್‌ ಒವೈಸಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತೀವ್ರ ಟೀಕೆಗೆ ಗುರಿಪಡಿಸಿದ್ದಾರೆ.

ADVERTISEMENT

‘ಲಡಾಖ್‌ನಲ್ಲಿನ ಚೀನಾದ ಸಿದ್ಧತೆಗಳು ಮತ್ತು ಚಟುವಟಿಕೆಗಳು 'ಆತಂಕಕಾರಿ' ಮತ್ತು 'ಕಣ್ಣು ತೆರೆಸುವಂಥದ್ದು' ಎಂದು ನಮಗೆ ಹೇಳಲು ಅಮೆರಿಕದ ಜನರಲ್‌ನ ಅಗತ್ಯ ಎದುರಾಗಿದೆ. ಏಕೆಂದರೆ ನಮ್ಮ ಮಾತುಗಾರ ಪ್ರಧಾನ ಮಂತ್ರಿ ಚೀನಾವನ್ನು ಹೇಗೆ ಉಚ್ಚರಿಸಬೇಕು ಎಂಬುದನ್ನೂ ಮರೆತಿದ್ದಾರೆ. ವಿದೇಶಿಗರೊಬ್ಬರು ಇದನ್ನು ಹೇಳಿರುವುದು ಸರ್ಕಾರಕ್ಕೆ ನಾಚಿಕೆ ತರಿಸುವಂಥದ್ದು’ ಎಂದು ವ್ಯಂಗ್ಯ ಮಾಡಿದ್ದಾರೆ.

‘ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ನನ್ನ ಪ್ರಶ್ನೆಗಳನ್ನು ನಿರಾಕರಿಸಲಾಗಿದೆ. ಚೀನಾದ ಗಡಿ ಚಟುವಟಿಕೆಗಳ ಬಗ್ಗೆ ಯಾವುದೇ ಚರ್ಚೆ ನಡೆಯದಿರುವುದು ದುಃಖಕರ ಸಂಗತಿಯಾಗಿದೆ. ಚೀನಾದ ವಿಚಾರದಲ್ಲಿ ಭಾರತೀಯರನ್ನು ಕತ್ತಲೆಯಲ್ಲಿಟ್ಟಿರುವ ಮೋದಿ ಸರ್ಕಾರ ದುರ್ಬಲ, ಅಂಜುಬುರುಕ ಮತ್ತು ಅಪ್ರಾಮಾಣಿಕವಾಗಿದೆ. ರಾಷ್ಟ್ರೀಯ ಭದ್ರತೆ ಎಂಬುದು ಒಂದು ಪಕ್ಷಕ್ಕೆ ಸಂಬಂಧಿಸಿದ ವಿಚಾರವಲ್ಲ ಇದು ಪ್ರತಿಯೊಬ್ಬ ಭಾರತೀಯನಿಗೂ ಸಂಬಂಧಿಸಿದ್ದಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.