ADVERTISEMENT

ರಾಜಸ್ಥಾನದಲ್ಲಿ ನಾವೇ ಕಿಂಗ್‌ಮೇಕರ್‌: ಭಾರತೀಯ ಬುಡಕಟ್ಟು ಪಕ್ಷ

ಪಿಟಿಐ
Published 19 ಜುಲೈ 2020, 12:04 IST
Last Updated 19 ಜುಲೈ 2020, 12:04 IST
ಗೆಹ್ಲೋಟ್‌ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರಕ್ಕೆ ಬಿಟಿಪಿ ಬೆಂಬಲ ನೀಡಿದ ಸನ್ನಿವೇಶ
ಗೆಹ್ಲೋಟ್‌ ನೇತೃತ್ವದ ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರಕ್ಕೆ ಬಿಟಿಪಿ ಬೆಂಬಲ ನೀಡಿದ ಸನ್ನಿವೇಶ   

ಜೈಪುರ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ನಡುವೆಯೇ ಭಾರತೀಯ ಬುಡಕಟ್ಟು ಪಕ್ಷ (ಬಿಟಿಪಿ) ತನ್ನನ್ನು ಕಿಂಗ್‌ ಮೇಕರ್‌ ಎಂದು ಹೇಳಿಕೊಂಡಿದೆ.

‘200 ಸದಸ್ಯ ಬಲದ ಸದನದಲ್ಲಿ ನಾವು ಹೊಂದಿರುವುದು ಇಬ್ಬರು ಶಾಸಕರನ್ನು. ಆದರೆ ನಾವೇ ಕಿಂಗ್‌ಮೇಕರ್‌ಗಳ ಸ್ಥಾನದಲ್ಲಿದ್ದೇವೆ. ರಾಜ್ಯ ವಿಧಾನಸಭೆಯಲ್ಲಿನ ಅತ್ಯಲ್ಪ ಸಂಖ್ಯೆಯ ಹೊರತಾಗಿಯೂ ಬಿಟಿಪಿ ದೊಡ್ಡ ಪ್ರಮಾಣದ ಶಕ್ತಿಯನ್ನೇ ಹೊಂದಿದೆ,’ ಎಂದು ಪಕ್ಷದ ಅಧ್ಯಕ್ಷ ಮಹೇಶ್‌ಬಾಯ್ ಸಿ ವಾಸವ ಭಾನುವಾರ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಶನಿವಾರ ಕಾಂಗ್ರೆಸ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದ ಬಿಟಿಪಿ ಶಾಸಕ ರಾಜ್‌ಕುಮಾರ್ ರೋಟ್ ಮತ್ತು ರಾಂಪ್ರಸಾದ್ ದಿಂಡೋರ್, ತಾವು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಇರುವುದಾಗಿ ಸ್ಪಷ್ಟಪಡಿಸಿದ್ದರು. ಈ ಮೂಲಕ ರಾಜಸ್ಥಾನದಲ್ಲಿ ಬಿಟಿಪಿ ಯಾರನ್ನು ಬೆಂಬಲಿಸಬಹುದು ಕುತೂಹಲಕ್ಕೆ ತೆರೆ ಬಿದ್ದಿತ್ತು. ಈ ಮಧ್ಯೆ ಬಿಟಿಪಿ ತಾನು ಕಿಂಗ್‌ ಮೇಕರ್‌ ಎಂದು ಘೋಷಿಸಿಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೆ ಪರೋಕ್ಷ ಸಂದೇಶ ರವಾನಿಸಿದೆ.

ADVERTISEMENT

ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಟಿಪಿಯ ಇಬ್ಬರು ಶಾಸಕರು ಆಡಳಿತಾರೂಢ ಕಾಂಗ್ರೆಸ್ ಅನ್ನು ಬೆಂಬಲಿಸಿದ್ದರು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಅವರನ್ನು ಸರ್ಕಾರದಿಂದ ಹೊರದಬ್ಬಿದ ಮೇಲೆ ಬಿಟಿಪಿಯು ತಾನು ತಟಸ್ಥವಾಗಿ ಉಳಿಯುವುದಾಗಿ ಹೇಳಿತ್ತು.
ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಿಸಿದ ತನ್ನ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಗೆಹ್ಲೋಟ್‌ ಅವರು ಭರವಸೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಪಕ್ಷದ ಅಧ್ಯಕ್ಷ ವಾಸವ ಹೇಳಿದ್ದಾರೆ.

ಗುಜರಾತ್‌ ಮೂಲದ ಭಾರತೀಯ ಬುಡಕಟ್ಟು ಪಕ್ಷವು ರಾಜಸ್ಥಾನದಲ್ಲಿ ಇಬ್ಬರು ಶಾಸಕರನ್ನು ಹೊಂದಿದೆ. ಚೌರಾಸಿಯಾ ಕ್ಷೇತ್ರದಿಂದ ರಾಜ್‌ಕುಮಾರ್ ರೋಟ್, ಸಗ್ವಾರ ಕ್ಷೇತ್ರದಿಂದ ರಾಂಪ್ರಸಾದ್ ದಿಂಡೋರ್ ಎಂಬುವವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.