ADVERTISEMENT

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹವಾಮಾನ ಮುನ್ಸೂಚನೆ ನೀಡಲಾರಂಭಿಸಿದ ಐಎಂಡಿ

ಐಎಂಡಿ ಉಪವಿಭಾಗದ ವ್ಯಾಪ್ತಿಗೆ ಗಿಲ್ಗಿಟ್‌–ಬಲ್ಟಿಸ್ತಾನ್‌

ಪಿಟಿಐ
Published 9 ಮೇ 2020, 2:41 IST
Last Updated 9 ಮೇ 2020, 2:41 IST
   

ನವದೆಹಲಿ: ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಪ್ರಾದೇಶಿಕ ಹವಾಮಾನ ಕೇಂದ್ರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹವಾಮಾನ ಮುನ್ಸೂಚನೆ ನೀಡುವುದನ್ನು ಆರಂಭಿಸಿದೆ.

ಪಿಒಕೆ ಭಾರತಕ್ಕೆ ಸೇರಿದೆ ಎನ್ನುವ ನಿಲುವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಮಹತ್ವದ ಕ್ರಮಕೈಗೊಳ್ಳಲಾಗಿದೆ.

ಗಿಲ್ಗಿಟ್‌–ಬಲ್ಟಿಸ್ತಾನ್‌ನಲ್ಲಿ ಚುನಾವಣೆ ನಡೆಸಲು ಪಾಕಿಸ್ತಾನ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಅವಕಾಶ ನೀಡಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ದಾಖಲಿಸಿತ್ತು. ನಂತರ ಈ ಬೆಳವಣಿಗೆ ನಡೆದಿದೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರ ಹವಾಮಾನ ಉಪವಿಭಾಗದ ಅಡಿಯಲ್ಲಿ ಪಿಒಕೆಯ ನಗರಗಳಾದ ಗಿಲ್ಗಿಟ್‌–ಬಲ್ಟಿಸ್ತಾನ್ ಮತ್ತು ಮುಜಾಫರ್‌ಬಾದ್‌ನ ಹವಾಮಾನ ಮುನ್ಸೂಚನೆಯ ಮಾಹಿತಿಯನ್ನು ಮೇ 5ರಿಂದ ನೀಡಲಾಗುತ್ತಿದೆ’ ಎಂದು ಐಎಂಡಿ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್‌ ಶ್ರೀವಾತ್ಸವ್‌ ತಿಳಿಸಿದ್ದಾರೆ.

‘ವಾಯವ್ಯ ವಿಭಾಗದ ವ್ಯಾಪ್ತಿಯಲ್ಲಿ ಈ ನಗರಗಳನ್ನು ಸೇರಿಸಲಾಗಿದೆ. ಈ ವಿಭಾಗದಲ್ಲಿ ಒಂಬತ್ತು ಉಪವಿಭಾಗಗಳಿವೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ದೆಹಲಿ, ಹರಿಯಾಣ, ಪಂಜಾಬ್‌, ಪೂರ್ವ ಉತ್ತರ ಪ್ರದೇಶ, ಪಶ್ಚಿಮ ಉತ್ತರ ಪ್ರದೇಶ, ಪೂರ್ವ ರಾಜಸ್ಥಾನ ಮತ್ತು ಪಶ್ಚಿಮ ರಾಜಸ್ಥಾನ ಉಪವಿಭಾಗ ವ್ಯಾಪ್ತಿಯಲ್ಲಿವೆ’ ಎಂದು ವಿವರಿಸಿದ್ದಾರೆ.

‘ದೈನಂದಿನ ರಾಷ್ಟ್ರೀಯ ಮತ್ತು ಸ್ಥಳೀಯ ಹವಾಮಾನ ಮುನ್ಸೂಚನೆ ಮಾಹಿತಿಯಲ್ಲಿ ಭಾರತೀಯ ಹವಾಮಾನ ಇಲಾಖೆ ಇದುವರೆಗೆ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಪ್ರದೇಶಗಳ ಬಗ್ಗೆ ಕೆಲ ವಿವರಗಳನ್ನು ನೀಡುತ್ತಿತ್ತು. ಆದರೆ, ಪ್ರಾದೇಶಿಕ ಹವಾಮಾನ ಕೇಂದ್ರದ ವ್ಯಾಪ್ತಿಯಲ್ಲಿ ಸೇರಿಸಿರಲಿಲ್ಲ. ಹೀಗಾಗಿ, ಈಗ ಸಂಪೂರ್ಣವಾಗಿ ವಿವರ ನೀಡಲು ಕ್ರಮಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಬಗ್ಗೆ ವಿವರ ನೀಡಿರುವ ಭಾರತೀಯ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಎಂ. ಮೊಹಾಪಾತ್ರಾ, ‘ಕಳೆದ ವರ್ಷ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಭಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ರಚಿಸಿದ ನಂತರ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಗಳ ಹವಾಮಾನದ ಮಾಹಿತಿಯನ್ನು ಪ್ರತಿ ದಿನ ನೀಡಲಾಗುತ್ತಿತ್ತು. ಆದರೆ, ಸಂಪೂರ್ಣ ವಿವರ ನೀಡುತ್ತಿರಲಿಲ್ಲ. ಈಗ ಜಮ್ಮು ಮತ್ತು ಕಾಶ್ಮೀರದ ಉಪವಿಭಾಗದ ಅಡಿಯಲ್ಲಿ ಅಗತ್ಯವಿರುವ ಎಲ್ಲ ಮಾಹಿತಿಯನ್ನು ಸಮಗ್ರವಾಗಿ ಒದಗಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.