ADVERTISEMENT

ಮಮತಾ ಸ್ಪರ್ಧಿಸಿರುವ ಭವಾನಿಪುರ ಕ್ಷೇತ್ರದಲ್ಲಿ ಶೇ 57ರಷ್ಟು ಮತದಾನ: ಚುನಾವಣಾ ಆಯೋಗ

ಪಿಟಿಐ
Published 1 ಅಕ್ಟೋಬರ್ 2021, 11:18 IST
Last Updated 1 ಅಕ್ಟೋಬರ್ 2021, 11:18 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭವಾನಿಪುರ ವಿಧಾನಸಭೆ ಕ್ಷೇತ್ರದಲ್ಲಿ ಗುರುವಾರ ಶೇ 57ರಷ್ಟು ಮತದಾನ ನಡೆದಿರುವುದಾಗಿ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರ್ಷ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಕ್ಷೇತ್ರಗಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡರು. ಆದರೆ, ಅವರ ತೃಣಮೂಲ ಕಾಂಗ್ರೆಸ್‌ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸಿತ್ತು. ಮುಖ್ಯಮಂತ್ರಿಯಾಗಿ ಆಯ್ಕೆಯಾದ ಮಮತಾ, ಈಗ ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವರು ಈ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.

ಏಪ್ರಿಲ್‌–ಮೇ ಚುನಾವಣೆಯ ವೇಳೆ ಇಬ್ಬರು ಅಭ್ಯರ್ಥಿಗಳ ಸಾವಿನ ಕಾರಣದಿಂದ ಎರಡು ಕ್ಷೇತ್ರಗಳಲ್ಲಿ ಮತದಾನ ರದ್ದುಪಡಿಸಲಾಗಿತ್ತು. ಗುರುವಾರ ಮುರ್ಶಿರಾಬಾದ್‌ನ ಸಂಶೇರ್‌ಗಂಜ್‌ ಮತ್ತು ಜಂಗಿಪುರ್‌ನಲ್ಲಿ ಕ್ರಮವಾಗಿ ಶೇ 79.92 ಮತ್ತು ಶೇ 77.63ರಷ್ಟು ಮತದಾನ ದಾಖಲಾಗಿದೆ.

ADVERTISEMENT

'ಭವಾನಿಪುರದಲ್ಲಿ ಶೇ 57.09ರಷ್ಟು ಮತದಾನ ಆಗಿದೆ. ಸಂಶೇರ್‌ಗಂಜ್‌ನಲ್ಲಿ ಗರಿಷ್ಠ ಮತದಾನ ದಾಖಲಾಗಿದೆ' ಎಂದು ಅಧಿಕಾರಿ ಹೇಳಿದ್ದಾರೆ.

ಗುರುವಾರ ಬೆಳಿಗ್ಗೆ 7ರಿಂದ ಸಂಜೆ 6ರವರೆಗೂ ಬಹುತೇಕ ಶಾಂತಿಯುತ ಮತದಾನ ನಡೆಯಿತು. ಮೂರೂ ಕ್ಷೇತ್ರಗಳಲ್ಲಿ ಒಟ್ಟು 6,97,164 ಮತದಾರರು ಮತದಾನದ ಅರ್ಹತೆ ಪಡೆದಿದ್ದರು.

ಟಿಎಂಸಿ ಮುಖ್ಯಸ್ಥೆ ಮತ್ತು ಮುಖ್ಯಮಂತ್ರಿ ಮಮತಾ ಅವರ ವಿರುದ್ಧ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್‌ ಹಾಗೂ ಸಿಪಿಐಎಂನ ಶ್ರೀಜಿಬ್‌ ಬಿಸ್ವಾಸ್‌ ಕಣಕ್ಕಿಳಿದಿದ್ದರು. ಭಾನುವಾರ (ಅಕ್ಟೋಬರ್‌ 3) ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.