ಮಿರಿಕ್(ಡಾರ್ಜಿಲಿಂಗ್): ಪ್ರವಾಹ ಪೀಡಿತ ಪ್ರದೇಶಗಳಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಂಗಳವಾರ ಭೇಟಿ ನೀಡಿದರು. ಇದೇ ವೇಳೆ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿ ಪರಿಹಾರ ಚೆಕ್ ವಿತರಿಸಿದರು.
ಮಳೆಯ ನಡುವೆಯೇ ರಸ್ತೆಯ ಮೂಲಕ ಡಾರ್ಜಿಲಿಂಗ್ ಜಿಲ್ಲೆಯ ಮಿರಿಕ್ ತಲುಪಿ ಬ್ಯಾನರ್ಜಿ, ಪ್ರವಾಹ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ಜಿಲ್ಲಾಡಳಿತ ನಡೆಸುತ್ತಿರುವ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಕಷ್ಟದ ಸಮಯದಲ್ಲಿ ಬೆಟ್ಟದ ಜನರೊಂದಿಗೆ ನಮ್ಮ ಸರ್ಕಾರ ನಿಂತಿದೆ. ಸಂತ್ರಸ್ತರಿಗೆ ಪರಿಹಾರ ಮತ್ತು ಮನೆ ಕಳೆದುಕೊಂಡವರಿಗೆ ಆರ್ಥಿಕ ಸಹಾಯವನ್ನು ಘೋಷಿಸಲಾಗಿದೆ’ ಎಂದು ಹೇಳಿದರು.
ಪ್ರವಾಹ ಮತ್ತು ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಮಮತಾ ಬ್ಯಾನರ್ಜಿ ಅವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಮನೆ ಕಳೆದುಕೊಂಡವರಿಗೆ ಪರಿಹಾರದ ಚೆಕ್ ಅನ್ನು ವಿತರಿಸಲಾಯಿತು.
ಬಾಧಿತ ಪ್ರದೇಶಗಳಿಗೆ ಆಹಾರ, ಟಾರ್ಪಾಲಿನ್, ಕಂಬಳಿ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.
ಕಳೆದ ವಾರ ಉತ್ತರ ಬಂಗಾಳದಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾದ ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ ಕನಿಷ್ಠ 30 ಜನರು ಮೃತಪಟ್ಟಿದ್ದರು. ರಸ್ತೆ ಮತ್ತು ರೈಲು ಸಂಪರ್ಕ ಕಡಿತಗೊಂಡಿದ್ದರಿಂದ ನೂರಾರು ಪ್ರವಾಸಿಗರು ಸಿಲುಕಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.