
ಕೋಲ್ಕತ್ತ (ಪಿಟಿಐ): ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಡಿಯಲ್ಲಿ ಸಾಂವಿಧಾನಿಕ ಆಡಳಿತವು ಸಂಪೂರ್ಣ ಕುಸಿತ ಕಂಡಿದೆ ಎಂದು ಬಿಜೆಪಿ ಬಂಗಾಳ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಗಾಳದಲ್ಲಿ ಚುನಾಯಿತ ಸರ್ಕಾರವು ತನ್ನ ನಿಜವಾದ ಅಧಿಕಾರ ಚಲಾಯಿಸುತ್ತಿಲ್ಲ’ ಎಂದು ಟೀಕಿಸಿದರು.
‘ಐ–ಪ್ಯಾಕ್’ ಕಚೇರಿ ಮೇಲಿನ ಇ.ಡಿ ದಾಳಿ ಸಮಯದಲ್ಲಿ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ‘ಸಾಂವಿಧಾನಿಕ ಚೌಕಟ್ಟಿನಿಂದ ಹೊರಗಿರುವ ವ್ಯಕ್ತಿಗಳು’ ರಾಜ್ಯದಲ್ಲಿ ದೀರ್ಘಕಾಲದಿಂದ ಆಡಳಿತ ನಡೆಸುತ್ತಿದ್ದಾರೆ. ಪೊಲೀಸರಿಗೂ ಸೂಚನೆಗಳನ್ನು ನೀಡುತ್ತಿರುವ ಅವರು ಪಂಚಾಯತ್‌ಗೆ ಸಂಬಂಧಿಸಿದ ನಿರ್ಧಾರಗಳ ಮೇಲೂ ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಅವರು ತಮ್ಮ ಕುರ್ಚಿಯಲ್ಲಿದ್ದರೂ, ಸರ್ಕಾರವನ್ನು ಬೇರೆ ಕಡೆಯಿಂದ ನಡೆಸಲಾಗುತ್ತಿದೆ. ಇದು ಕಾನೂನುಬಾಹಿರ ಮಾತ್ರವಲ್ಲದೆ, ಬಂಗಾಳದ ಜನರಿಗೆ ಮಾಡಿರುವ ದ್ರೋಹ’ ಎಂದು ದೂರಿದರು.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇ.ಡಿ ಅಧಿಕಾರಿಗಳು ಖಾಸಗಿ ಸಂಸ್ಥೆಯ ಕಚೇರಿಯ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ಮುಖ್ಯಮಂತ್ರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.