
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿನ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ವಿಚಾರಣಾ ಕೇಂದ್ರವೊಂದಕ್ಕೆ ಚುನಾವಣಾ ನೋಂದಣಾಧಿಕಾರಿ(ಇಆರ್‌ಒ) ತೆರಳುತ್ತಿದ್ದಾಗ ಗಂಭೀರ ಭದ್ರತಾಲೋಪವಾಗಿದ್ದು, ಈ ಬಗ್ಗೆ ಜನವರಿ 6ರೊಳಗಾಗಿ ಸಮಗ್ರ ವರದಿ ನೀಡಬೇಕು ಎಂದು ಚುನಾವಣಾ ಆಯೋಗ ರಾಜ್ಯ ಪೊಲೀಸರಿಗೆ ಸೂಚಿಸಿದೆ.
ಹಿರಿಯ ಅಧಿಕಾರಿ ಮುರುಗನ್ ಅವರು ಡಿಸೆಂಬರ್ 29ರಂದು ಎಸ್‌ಐಆರ್ ವಿಚಾರಣಾ ಕೇಂದ್ರಕ್ಕೆ ತೆರಳುತ್ತಿದ್ದಾಗ ಭದ್ರತಾ ಲೋಪ ಸಂಭವಿಸಿದೆ. ಇಂಥ ಹಲವು ಘಟನೆಗಳು ನಡೆದಿದ್ದು, ಈ ಕುರಿತು ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದು ಆಯೋಗವು ಪೊಲೀಸ್ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.
ಘೋಷಣೆ ಕೂಗುವುದು, ಗುಂಪು ಸೇರುವುದು, ಕೆಲಸಕ್ಕೆ ಅಡ್ಡಿಪಡಿಸುವುದು ಮತ್ತು ಅಧಿಕಾರಿಗಳ ವಾಹನಕ್ಕೆ ಅಡ್ಡಿಪಡಿಸಿರುವ ಕುರಿತು ವರದಿಗಳಾಗಿವೆ. ಚುನಾವಣಾ ಅಧಿಕಾರಿಗಳ ಪ್ರವಾಸದ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಿದ್ದರೂ ಸೂಕ್ತ ಭದ್ರತೆ ನೀಡಲಾಗಿಲ್ಲ. ಚುನಾವಣಾ ಆಯೋಗದ ವಿಶೇಷ ವೀಕ್ಷಕರು ಮತ್ತು ಪಶ್ಚಿಮ ಬಂಗಾಳ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಲ್ಲಿಸಿರುವ ವರದಿಗಳಲ್ಲೂ ಈ ಬಗ್ಗೆ ಉಲ್ಲೇಖಗಳಿವೆ ಎಂದು ಆಯೋಗ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.