ADVERTISEMENT

ಪಶ್ಚಿಮ ಬಂಗಾಳ | ಟಿಎಂಸಿ–ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ, ಮೂವರ ಹತ್ಯೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 4:29 IST
Last Updated 9 ಜೂನ್ 2019, 4:29 IST
ಮಾರಾಮಾರಿ ಘಟನೆ ನಡೆದ ಸ್ಥಳದ ದೃಶ್ಯ
ಮಾರಾಮಾರಿ ಘಟನೆ ನಡೆದ ಸ್ಥಳದ ದೃಶ್ಯ   

ಕೋಲ್ಕತ್ತ:ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸಂಘರ್ಷ ನಡೆದಿದ್ದು, ಮೂವರು ಸಾವಿಗೀಡಾಗಿದ್ದಾರೆ.

ಶನಿವಾರ ಸಂಜೆ ನಡೆದ ಮಾರಾಮಾರಿಯಲ್ಲಿ ಟಿಎಂಸಿಯ ಒಬ್ಬ, ಬಿಜೆಪಿಯ ಇಬ್ಬರು ಮೃತಪಟ್ಟಿದ್ದಾರೆ.

ಕೋಲ್ಕತ್ತಾದಿಂದ 70 ಕಿ.ಮೀ. ದೂರದ ಸಂಧೇಖಾಲಿ ಪ್ರದೇಶದ ನಯ್‌ಜತ್‌ನಲ್ಲಿನ ಹಟ್ಗಾಚ್‌ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಕಲಾಗಿದ್ದ ಪಕ್ಷದ ಧ್ವಜಗಳನ್ನು ತೆಗೆದುಹಾಕುವ ವಿಚಾರಕ್ಕೆ ಸಂಜೆ 7ಕ್ಕೆ ಮಾರಾಮಾರಿಯಾಗಿದೆ.

ADVERTISEMENT

26 ವರ್ಷ ವಯಸ್ಸಿನ ಟಿಎಂಸಿ ಕಾರ್ಯಕರ್ತ ಕ್ಯೂಮ್‌ ಮೊಲ್ಲಾ ಎಂಬುವರನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಬಿಜೆಪಿಯ ಪ್ರದೀಪ್‌ ಮಂಡಲ್‌ ಮತ್ತು ಸುಕಾಂತ ಮಂಡಲ್‌ ಎಂಬಿಬ್ಬರನ್ನು ಹತ್ಯೆ ಮಾಡಲಾಗಿದೆ. ಈ ಇಬ್ಬರಲ್ಲಿ ಒಬ್ಬರಿಗೆ ಎಡ ಕಣ್ಣಿಗೆ ಗುಂಡು ಹಾರಿಸಲಾಗಿದೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.

ಘಟನೆಯ ಬಳಿಕ ರಾತ್ರಿ ಮೂವರ ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಬಿಜೆಪಿಯ ಮತ್ತೊಬ್ಬ ಕಾರ್ಯಕರ್ತ ತಪನ್‌ ಮಂಡಲ್‌ ಎಂಬುವರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಐವರು ನಾಪತ್ತೆಯಾಗಿದ್ದಾರೆ ಎಂದು ವರಿದಯಾಗಿದೆ.

ಬಿಜೆಪಿಯ ಮೂವರು ಕಾರ್ಯಕರ್ತರನ್ನು ಟಿಎಂಸಿ ಗುಂಡಿಟ್ಟು ಹತ್ಯೆ ಮಾಡಿದೆ. ಬಿಜೆಪಿ ವಿರುದ್ಧದ ಸಂಘರ್ಷಕ್ಕೆಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇರ ಹೊಣೆ ಎಂದು ಬಿಜೆಪಿಯ ಮುಖಂಡ ಕೇಂದ್ರ ರೈಲ್ವೆ ಮಾಜಿ ಸಚಿವ ಮುಖುಲ್‌ ರಾಯ್‌ ಆರೋಪಿಸಿದ್ದಾರೆ.

ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದಿದ್ದು, ಶಾಂತಿ ಕಾಪಾಡಲು ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದಾರೆ. ಈ ಪ್ರದೇಶವು ಬಶಿರಾತ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಇಲ್ಲಿ ತೃಣಮೂಲ ಕಾಂಗ್ರೆಸ್‌ ಗೆದ್ದಿದೆ. ಆದರೆ, ಹಡ್ಗಾಚ್‌ದಲ್ಲಿ ಬಿಜೆಪಿ 144 ಮತಗಳ ಮುನ್ನಡೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.