ADVERTISEMENT

‘ಹಾಥ್‌ ಸೆ ಹಾಥ್‌ ಜೋಡೊ’ಕಾಂಗ್ರೆಸ್‌ನ ಮುಂದಿನ ನಡೆ: ಕೆ.ಸಿ.ವೇಣುಗೋಪಾಲ್‌

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 11:01 IST
Last Updated 4 ಡಿಸೆಂಬರ್ 2022, 11:01 IST
   

ನವದೆಹಲಿ: ರಾಹುಲ್‌ ಗಾಂಧಿಯವರ ‘ಭಾರತ್‌ ಜೋಡೊ’ಯಾತ್ರೆ ಬಳಿಕ ‘ಹಾಥ್‌ಸೆ ಹಾಥ್‌ಜೋಡೊ’ ಅಭಿಯಾನಕ್ಕೆ ಕಾಂಗ್ರೆಸ್‌ ಪಕ್ಷ ಸಿದ್ಧವಾಗುತ್ತಿದೆ ಎಂದು ಪಕ್ಷದ ಮುಖಂಡ ಕೆ.ಸಿ.ವೇಣುಗೋಪಾಲ್‌ ಹೇಳಿದ್ದಾರೆ.


ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ರಚಿಸಿರುವ ಚಾಲನಾ ಸಮಿತಿ ಮೊದಲ ಸಭೆ ಭಾನುವಾರ ದೆಹಲಿಯಲ್ಲಿ ನಡೆಯಿತು. ಖರ್ಗೆ ನೇತೃತ್ವದ ಸಭೆಯಲ್ಲಿ ಸೋನಿಯಾ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.


ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸಿ.ವೇಣುಗೋಪಾಲ್‌, ಜ.26ರ ಬಳಿಕ ‘ಹಾಥ್‌ಸೆ ಹಾಥ್‌’ ಬೃಹತ್‌ ಅಭಿಯಾನಕ್ಕೆ ನಿರ್ಧರಿಸಿದ್ದೇವೆ. ಇದು ಎರಡು ತಿಂಗಳ ಅಭಿಯಾನವಾಗಿದ್ದು, ಬ್ಲಾಕ್‌ ಮಟ್ಟದ ಪಾದಯಾತ್ರೆ ನಡೆಸಲಾಗುವುದು. ಈ ಅವಧಿಯಲ್ಲಿ ರಾಹುಲ್ ಗಾಂಧಿಯವರ ಜೋಡೊ ಯಾತ್ರೆ ಸಾಧನೆ ಮತ್ತು ಮೋದಿ ಸರ್ಕಾರದ ವೈಫಲ್ಯಗಳನ್ನು ಸಾರುತ್ತೇವೆ. ಈ ಯಾತ್ರೆಯಲ್ಲಿ ಯುವಕರತ್ತ ಗಮನಹರಿಸುತ್ತೇವೆ’ ಎಂದರು.

ADVERTISEMENT


‘ಇಂದು ಸಂಜೆ ಭಾರತ್‌ ಜೋಡೊ ಯಾತ್ರೆ ರಾಜಸ್ಥಾನ ಪ್ರವೇಶಿಸಲಿದೆ. ಈವರೆಗೆ 7 ರಾಜ್ಯಗಳ 2500 ಕಿಲೋಮೀಟರ್‌ ವ್ಯಾಪ್ತಿಯನ್ನು ಯಾತ್ರೆ ತಲುಪಿದೆ. ಪ್ರಯಾಣದ 1000 ಕಿ.ಮೀ ಬಾಕಿಯಿದೆ. ಮುಂದಿನ ದಿನಗಳಲ್ಲಿ ಯುವಕರ ಸಮಸ್ಯೆಗಳತ್ತ ಗಮನಹರಿಸುತ್ತೇವೆ ಎಂದು ಜೈರಾಂ ರಮೇಶ್‌ ಹೇಳಿದರು.


ಸಭೆಯಲ್ಲಿ ‘ಭಾರತ್‌ ಜೋಡೊ’ ಯಾತ್ರೆ ಬಳಿಕ ಏನು ಮಾಡಬೇಕೆಂಬುದು ಮುಖ್ಯವಾಗಿ ಚರ್ಚೆಯಾಗಿದೆ. ಜಿಲ್ಲಾ ಮಟ್ಟದ ಯಾತ್ರೆಯಾಗಿದ್ದು ರಾಹುಲ್‌ ಗಾಂಧಿ ಇದರಲ್ಲಿ ‘ಭಾರತ್‌ ಜೋಡೊ’ ಯಾತ್ರೆ ಸಾಧನೆಯ ಪ್ರಮುಖ ಅಂಶಗಳನ್ನು ವಿವರಿಸುತ್ತಾರೆ ಎಂದು ಜೈರಾಂ ರಮೇಶ್‌ ತಿಳಿಸಿದರು.


ಚಳಿಗಾಲದ ಅಧಿವೇಶನದಲ್ಲಿ ಗಮನಹರಿಸಬೇಕಾದ ಅಂಶಗಳತ್ತಲೂ ಸಭೆಯಲ್ಲಿ ಚರ್ಚಿಸಲಾಯಿತು. ತಳಮಟ್ಟದಿಂದ ಪಕ್ಷ ಸಂಘಟನೆಗೆ ಖರ್ಗೆ ಸಭೆಯಲ್ಲಿ ಸೂಚಿಸಿದ್ದಾರೆಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.