ADVERTISEMENT

ಕೋವಿಡ್‌ ತಡೆಗೆ ಸಿದ್ಧತೆ ಏನು: ‘ಸುಪ್ರೀಂ’ ಪ್ರಶ್ನೆ

ಮಾಹಿತಿ ನೀಡಲು ಕೇಂದ್ರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:01 IST
Last Updated 27 ಏಪ್ರಿಲ್ 2021, 21:01 IST
   

ನವದೆಹಲಿ: ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆ, ಆರೋಗ್ಯ ಮೂಲಸೌಕರ್ಯ, ಅಗತ್ಯವಾಗಿ ಬೇಕಾದ ಔಷಧಗಳು ಮತ್ತು ಲಸಿಕೆಯ ಲಭ್ಯತೆಯ ಸ್ಥಿತಿಗತಿ ಕುರಿತು ಮಾಹಿತಿ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಕೋವಿಡ್‌–19ರ ಎರಡನೇ ಅಲೆಯು ತೀವ್ರವಾಗಿ ಹರಡುತ್ತಿದ್ದು ಅದನ್ನು ತಡೆಯಲು ಮಾಡಿಕೊಂಡಿರುವ ಸಿದ್ಧತೆ ಏನು ಎಂದು ಕೋರ್ಟ್‌ ಪ್ರಶ್ನಿಸಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ನೇತೃತ್ವದ ಪೀಠವು ಈ ಪ್ರಕರಣವನ್ನು ಸ್ವಯಂ ಪ್ರೇರಣೆಯಿಂದ ಕೈಗೆತ್ತಿಕೊಂಡಿದೆ.

ಕೋವಿಡ್‌ ತಡೆ ಲಸಿಕೆ ತಯಾರಿಸುವ ಕಂಪನಿಗಳು ಲಸಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಭಿನ್ನ ದರ ನಿಗದಿ ಮಾಡಿದ್ದರ ಹಿಂದಿನ ತರ್ಕ ಏನು ಎಂದೂ ಪೀಠವು ಪ್ರಶ್ನಿಸಿದೆ. ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು ಈ ವಿಚಾರವನ್ನು ಎತ್ತಿದರು.

ADVERTISEMENT

‘ನಾವು ಕಾರ್ಯಾಂಗದ ಕೆಲಸದಲ್ಲಿ ಮಧ್ಯಪ್ರವೇಶಿಸುತ್ತಿಲ್ಲ. ಸಲಹೆಗಳನ್ನು ಮಾತ್ರ ನೀಡುತ್ತಿದ್ದೇವೆ. 18 ದಾಟಿದ ಎಲ್ಲರಿಗೂ ಮೇ 1ರಿಂದ ಲಸಿಕೆ ನೀಡಲಾಗುವುದು ಎಂದ ಮೇಲೆ, ಈ ಹೆಚ್ಚುವರಿ ಬೇಡಿಕೆಯನ್ನು ಪೂರೈಸುವುದು ಹೇಗೆ ಎಂಬುದನ್ನು ತಿಳಿಯಲು ಬಯಸಿದ್ದೇವೆ’ ಎಂದು ಪೀಠವು ಹೇಳಿದೆ. ಆರೋಗ್ಯ ಮೂಲಸೌಕರ್ಯ ಲಭ್ಯತೆ ಬಗ್ಗೆ ರಾಜ್ಯ ಸರ್ಕಾರಗಳೂ ಮಾಹಿತಿ ನೀಡಬೇಕು ಎಂದೂ ಹೇಳಿದೆ.

‘ಹೈಕೋರ್ಟ್‌ ಸ್ಥಾನ ಆಕ್ರಮಣವಲ್ಲ’
ಕೋವಿಡ್‌ಗೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡಿದ್ದರ ಹಿಂದೆಹೈಕೋರ್ಟ್‌ಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುವ ಉದ್ದೇಶ ಇಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.‘ತಮ್ಮ ವ್ಯಾಪ್ತಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ನಿಗಾ ಇರಿಸಲು ಹೈಕೋರ್ಟ್‌ಗಳೇ ಸೂಕ್ತ’ ಎಂದೂ ಪೀಠ ತಿಳಿಸಿದೆ.

ಹಾಗಿದ್ದರೂ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಮೂಕಪ್ರೇಕ್ಷಕನಂತೆ ಇರುವುದಕ್ಕೂ ಆಗದು ಎಂದು ಪೀಠ ಹೇಳಿದೆ.

ಇದೇ 22ರಂದು ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿತ್ತು. ಹೈಕೋರ್ಟ್‌ಗಳು ಕೋವಿಡ್‌ಗೆ ಸಂಬಂಧಿಸಿದ ಪ್ರಕರಣಗಳವಿಚಾರಣೆ ನಡೆಸುವುದನ್ನು ತಡೆಯುವುದೇ ಇದರ ಉದ್ದೇಶ ಎಂದು ಹಲವು ಹಿರಿಯ ವಕೀಲರು ಟೀಕಿಸಿದ್ದರು. ಹಾಗಾಗಿ, ಸುಪ್ರೀಂ ಕೋರ್ಟ್‌ ಈ ಸ್ಪಷ್ಟನೆ ನೀಡಿದೆ ಎಂದುವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.