ಕೊಚ್ಚಿ: ಜನ ವಸತಿ ಪ್ರದೇಶಗಳಲ್ಲಿ ಕಾಡಾನೆ ದಾಳಿಯನ್ನು ನಿಯಂತ್ರಿಸಲು ಭವಿಷ್ಯದಲ್ಲಿ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ವರದಿ ನೀಡುವಂತೆ ಕೇರಳ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳಿದೆ.
ಪಾಲಕ್ಕಾಡ್ ಜಿಲ್ಲೆಯಲ್ಲಿನ ನಿರ್ಮಾಣ ಹಂತದಲ್ಲಿರುವ ಐಐಟಿ ಕ್ಯಾಂಪಸ್ ಸೇರಿದಂತೆ, ವಿವಿಧ ವಸತಿ ಪ್ರದೇಶಗಳ ಮೇಲೆ ಇತ್ತೀಚೆಗೆ ನಡೆದ ಕಾಡಾನೆಗಳ ದಾಳಿಯನ್ನು ಉಲ್ಲೇಖಿಸಿರುವ ನ್ಯಾಯಾಲಯ, ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ರಾಜ್ಯ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ಪಿ. ಗೋಪಿನಾಥ್ ಅವರನ್ನೊಳಗೊಂಡ ನ್ಯಾಯಪೀಠ, ತಿರುವನಂತಪುರಂನ ಹೊರವಲಯದ ಆದಿಮಲತುರ ಬೀಚ್‌ನಲ್ಲಿ ಬ್ರೂನೋ ಎಂಬ ನಾಯಿಯನ್ನು ಭೀಕರವಾಗಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆಯ ಭಾಗವಾಗಿ ಸರ್ಕಾರದಿಂದ ಈ ಮಾಹಿತಿಯನ್ನು ಕೇಳಿದೆ.
ಪಿಐಎಲ್‌ನ ಭಾಗವಾಗಿ ನ್ಯಾಯಾಲಯವು ಎರ್ನಾಕುಲಂ ಜಿಲ್ಲೆಯ ತೃಕ್ಕಾಕರ ಪುರಸಭೆ ಪ್ರದೇಶದಲ್ಲಿ ವಿಷ ಹಾಕಿ ನೂರಾರು ಬೀದಿ ನಾಯಿಗಳನ್ನು ಕೊಂದಿರುವುದು ಸೇರಿದಂತೆ ಪ್ರಾಣಿಗಳ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಇತರ ಘಟನೆಗಳನ್ನೂ ಇದೇ ವೇಳೆ ಪರಿಶೀಲನೆ ನಡೆಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.