
ನವದೆಹಲಿ: ಮೆಟಾ ಪ್ಲಾಟ್‌ಫಾರ್ಮ್ಸ್ ಅಥವಾ ಮೆಟಾ ಸಮೂಹದ ಇತರ ಕಂಪನಿಗಳೊಂದಿಗೆ ದತ್ತಾಂಶ ಹಂಚಿಕೊಳ್ಳುವ ಆಯ್ಕೆಯನ್ನು ಬಳಕೆದಾರರಿಗೇ ಬಿಡಬೇಕು ಎಂದು ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿರುವ ಆದೇಶವನ್ನು ಜಾರಿಗೆ ತರುವುದಾಗಿ ವಾಟ್ಸ್‌ಆ್ಯಪ್, ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ.
ಸಿಸಿಐ ಶಿಫಾರಸು ಗಮನದಲ್ಲಿ ಇಟ್ಟುಕೊಂಡು, ವಾಟ್ಸ್‌ಆ್ಯಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ಪ್ಲಾಟ್‌ಫಾರ್ಮ್‌ನಲ್ಲಿ ಜಾಹೀರಾತುಗಳ ಮೇಲೆ ಐದು ವರ್ಷ ನಿಷೇಧ ಹೇರಬೇಕು ಎಂಬ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಈ ಎರಡೂ ಕಂಪನಿಗಳಿಗೆ ಸಿಜೆಐ ನೇತೃತ್ವದ ಪೀಠವು ಸೂಚಿಸಿತು.
ಸಿಸಿಐ ಆದೇಶ ಜಾರಿಗೊಳಿಸುವಂತೆ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ನೀಡಿರುವ ಆದೇಶವನ್ನು ಪ್ರಶ್ನಿಸಿದ ತನ್ನ ಅರ್ಜಿಯನ್ನು ಹಿಂಪಡೆಯುವುದಾಗಿ ವಾಟ್ಸ್‌ಆ್ಯಪ್ ಇದೇ ಸಂದರ್ಭದಲ್ಲಿ ನ್ಯಾಯಪೀಠದ ಗಮನಕ್ಕೆ ತಂದಿತು.
ವಾಟ್ಸ್‌ಆ್ಯಪ್ ಮತ್ತು ಮೆಟಾ ಪ್ಲಾಟ್‌ಫಾರ್ಮ್‌ಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಹಿಂಪಡೆಯಲು ನ್ಯಾಯಾಲಯವು ಅನುಮತಿ ನೀಡಿತು. ಆದಾಗ್ಯೂ, ಎನ್‌ಸಿಎಲ್‌ಎಟಿಗೆ ಅಗತ್ಯವಿರುವಂತೆ ಬಳಕೆದಾರರ ದತ್ತಾಂಶ ಹಂಚಿಕೆಯ ನಿರ್ದೇಶನಗಳ ಅನುಪಾಲನಾ ವರದಿಯನ್ನು ಸಿಸಿಐಗೆ ಸಲ್ಲಿಸುವಂತೆ ಅದು ವಾಟ್ಸ್‌ಆ್ಯಪ್‌ಗೆ ನಿರ್ದೇಶನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.