ADVERTISEMENT

ನನಗಿಂತ ನತದೃಷ್ಟ ಇನ್ಯಾರು?: 6 ಮಕ್ಕಳು, 17 ಬಂಧುಗಳನ್ನು ಕಳೆದುಕೊಂಡ J&K ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 22 ಜನವರಿ 2025, 10:31 IST
Last Updated 22 ಜನವರಿ 2025, 10:31 IST
<div class="paragraphs"><p>17ನೇಯವರಗಾಗಿ ಮೃತಪಟ್ಟ ಯಸ್ಮೀನ್‌ ಕೌಸರ್‌ ಅವರನ್ನು ಹೂಳಲು ಗುಂಡಿ ತೆಗೆಯುತ್ತಿರುವುದು</p></div>

17ನೇಯವರಗಾಗಿ ಮೃತಪಟ್ಟ ಯಸ್ಮೀನ್‌ ಕೌಸರ್‌ ಅವರನ್ನು ಹೂಳಲು ಗುಂಡಿ ತೆಗೆಯುತ್ತಿರುವುದು

   

ಪಿಟಿಐ ಚಿತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆ ರಾಔರಿಯ ಬಧಾಲ್‌ ಗ್ರಾಮದಲ್ಲಿ ಮೊನ್ನೆಮೊನ್ನೆವರೆಗೂ ಪ್ರೀತಿ, ಸಂಭ್ರಮದಿಂದ ಕೂಡಿದ್ದ ಮುಹಮ್ಮದ್‌ ಅಸ್ಲಮ್‌ ಮತ್ತು ಶಾಕಿಯಾ ಬೀ ದಂಪತಿಯ ಕುಟುಂಬ ಏಕಾಏಕಿ ಶೋಕಸಾಗರದಲ್ಲಿ ಮುಳುಗಿದೆ.

ADVERTISEMENT

ದಂಪತಿಯ ಆರು ಮಕ್ಕಳು ಸೇರಿದಂತೆ, ಅವರ ಕುಟುಂಬದೊಂದಿಗೆ ನಂಟು ಹೊಂದಿದ್ದ 17 ಮಂದಿ, ಡಿಸೆಂಬರ್‌ 7ರಿಂದ ಜನವರಿ 19ರ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಈ ನಿಗೂಢ ಸಾವಿನ ಸರಣಿ ಅಸ್ಲಮ್‌ ಕುಟುಂಬವನ್ನು ಜರ್ಜರಿತಗೊಳಿಸಿರುವುದಷ್ಟೇ ಅಲ್ಲ, ಇಡೀ ಗ್ರಾಮದಲ್ಲಿ ಆತಂಕ, ಸೂತಕದ ಛಾಯೆ ಮೂಡಿಸಿದೆ.

ಅಸ್ಲಮ್‌ ಕುಟುಂಬದವರ ಪೈಕಿ, ಅವರು ಮತ್ತು ಅವರ ಪತ್ನಿ ಶಾಕಿಯಾ ಬಿ ಮಾತ್ರ– ಛಿದ್ರಗೊಂಡ ಕನಸಿನ ಪ್ರಪಂಚದ ನೆನಪುಗೊಳೊಂದಿಗೆ ಬದುಕಿ ಉಳಿದಿದ್ದಾರೆ. ಮಕ್ಕಳ ನಗು, ಆಟ, ಕೂಗಾಟದಿಂದ ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ಮನೆಯಲ್ಲಿ ಈಗ ಮೌನ ಮಾರ್ದನಿಸುತ್ತಿದೆ.

ಸ್ಥಳೀಯ ವರದಿಗಾರ ಸಮಿತ್‌ ಬಾರ್ಗವ್‌ ಅವರು, ನೋವಿನಲ್ಲಿರುವ ಕುಟುಂಬವನ್ನು ಸಂಪರ್ಕಿಸಿ, ಪ್ರಕರಣದ ಕುರಿತು ಮಾಹಿತಿ ಪಡೆಯುವ ಪ್ರಯತ್ನ ಮಾಡಿದ್ದಾರೆ. ಈ ವೇಳೆ ಅಸ್ಲಮ್‌ ಅವರು, 'ಎಲ್ಲ ಆರು ಮಕ್ಕಳನ್ನು, ತಂದೆ–ತಾಯಿಯಂತೆ ನಮ್ಮೊಂದಿಗೇ ಇದ್ದ ಚಿಕ್ಕಪ್ಪ–ಚಿಕ್ಕಮ್ಮನನ್ನು ಕಳೆದುಕೊಂಡಿರುವ ನನಗಿಂತ ನತದೃಷ್ಟ ಪ್ರಪಂಚದಲ್ಲಿ ಇನ್ಯಾರು ಇರಲು ಸಾಧ್ಯ' ಎಂದು ಕಣ್ಣೀರಿಟ್ಟಿದ್ದಾರೆ.

ಮುಂದುವರಿದು, 'ನಿಗೂಢ ಸಾವಿನ ಹಿಂದಿರುವ ಸತ್ಯವನ್ನು ಬಹಿರಂಗಪಡಿಸುವಂತೆ ಭಗವಂತ ಅಲ್ಲಾನಲ್ಲಿ ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.

ಎಲ್ಲರ ಸಾವಿಗೆ ನಿಖರ ಕಾರಣವೇನೆಂಬುದು ಈವರೆಗೆ ಸ್ಪಷ್ಟವಾಗಿಲ್ಲ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಸೇರಿದಂತೆ ಸ್ಥಳೀಯ ಮತ್ತು ರಾಷ್ಟ್ರೀಯ ಆರೋಗ್ಯ ಆಡಳಿತಗಳು ಇನ್ನಷ್ಟೇ ಅದನ್ನು ಪತ್ತೆ ಹಚ್ಚಬೇಕಿದೆ.

ಡಿಸೆಂಬರ್ 7ರಲ್ಲಿ ಮೊದಲ ಸಾವು ಸಂಭವಿಸಿದಾಗಿನಿಂದ, ಈ ಕುರಿತು ವರದಿ ಮಾಡುತ್ತಿರುವ ಬಾರ್ಗವ್‌ ಅವರು, ಏನೂ ಹೇಳಲಾಗದ ಸ್ಥಿತಿ ಇದೆ ಎಂದು ಪ್ರತಿಕ್ರಿಯಿಸಿದ್ದಾರೆ. 'ನವದೆಹಲಿ ಮತ್ತು ಚಂಡೀಗಢದಿಂದ ಬಂದಿದ್ದ ಆರೋಗ್ಯ ತಜ್ಞರ ತಂಡ ಸಹ, ಸಾವುಗಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಹೇಳಿಕೆ ನೀಡಿಲ್ಲ' ಎಂದಿದ್ದಾರೆ.

'ಸಾವುಗಳು ಸಂಭವಿಸಿದ ವೇಗ ಮತ್ತು ಗಂಭೀರತೆಯು ಸ್ಥಳೀಯರನ್ನು ಆತಂಕಕ್ಕೀಡುಮಾಡಿದೆ. ಅನೇಕರು, ರೋಗವು ಸಾಂಕ್ರಾಮಿಕವಾಗುವ ಭೀತಿಯಲ್ಲಿದ್ದಾರೆ' ಎಂದಿರುವ ಅವರು, '1,500ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮದಲ್ಲಿ, ಮೂರು ಕುಟುಂಬದವರಷ್ಟೇ ಈವರೆಗೆ ಮೃತಪಟ್ಟಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

ಯಸ್ಮೀನ್‌ ಕೌಸರ್‌ (15), ಜಹೂರ್‌ ಅಹ್ಮದ್‌ (14), ಸಫೀನಾ ಕೌಸರ್‌ (11), ಮರೂಫ್‌ ಅಹ್ಮದ್‌ (10), ನಬೀನಾ ಕೌಸರ್‌ (8) ಹಾಗೂ ಝಬೀನಾ ಕೌಸರ್‌ (7), ಅಸ್ಲಮ್‌ ಅವರ ಮೃತ ಮಕ್ಕಳು.

ಬಧಾಲ್‌ ಗ್ರಾಮವನ್ನು 'ನಿಯಂತ್ರಿತ ವಲಯ' ಎಂದು ಅಧಿಕಾರಿಗಳು ಮಂಗಳವಾರ ಘೋಷಿಸಿದ್ದಾರೆ. ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದ್ದು, ಆಹಾರ ಪದಾರ್ಥಗಳು ಹಾಗೂ ಸೇವನೆ ಮೇಲೆ ನಿಗಾ ಇರಿಸುವಂತೆ ಆದೇಶಿಸಲಾಗಿದೆ. 

ಗೃಹ ಸಚಿವಾಲಯದ ತಂಡದೊಂದಿಗೆ ಜನವರಿ 20ರಂದು ಗ್ರಾಮಕ್ಕೆ ಬಂದು, ಸಾವುಗಳು ಸಂಭವಿಸಿರುವ ಸ್ಥಳದಲ್ಲಿನ ಮಾದರಿಗಳನ್ನು ಸಂಗ್ರಹಿಸಿದ್ದ ತಜ್ಞರ ತಂಡ ಅಸ್ಲಮ್‌ ಅವರ ಮನೆಯನ್ನು ಸೀಲ್‌ ಮಾಡಿತ್ತು. ಹಾಗೆಯೇ, ಮುಹಮ್ಮದ್‌ ರಫೀಕ್‌ ಎಂಬವರ ಮನೆ ಪಕ್ಕದಲ್ಲಿರುವ ಹೊಂಡದಲ್ಲಿನ ನೀರಿನ ಬಳಕೆ ನಿರ್ಬಂಧಿಸಿದೆ. ರಫೀಕ್‌ ಅವರ ಕುಟುಂಬದ ನಾಲ್ಕು ಮಂದಿ ಸಹ ನಿಗೂಢವಾಗಿ ಸಾವಿಗೀಡಾಗಿದ್ದಾರೆ.

ಹೊಂಡದ ನೀರಿನಲ್ಲಿ ಕೀಟನಾಶಕ ಬೆರೆತಿರುವುದು ಮಾದರಿ ಪರಿಕ್ಷೆ ವೇಳೆ ಕಂಡು ಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಸಾಧ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ದಿಲ್‌ ಮಿರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.