ADVERTISEMENT

ಕೆಮ್ಮಿನ ಕಲುಷಿತ ಸಿರಪ್‌: ಡಬ್ಲ್ಯುಎಚ್‌ಒ ಎಚ್ಚರಿಕೆ

ಕಳಪೆ ಸಿರಪ್ ಸೇವನೆಯಿಂದ 22 ಮಕ್ಕಳ ಸಾವು: ಕಣ್ಗಾವಲಿಗೆ ಸೂಚನೆ

ಪಿಟಿಐ
Published 14 ಅಕ್ಟೋಬರ್ 2025, 16:13 IST
Last Updated 14 ಅಕ್ಟೋಬರ್ 2025, 16:13 IST
<div class="paragraphs"><p>ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!</p></div>

ಕೆಮ್ಮಿನ ಔಷಧ ಎಂಬ ಗುಮ್ಮ.. ಮಕ್ಕಳಿಗೆ ಸಿರಪ್‌ ಕುಡಿಸುವುದು ಅಪಾಯಕ್ಕೆ ಅಹ್ವಾನ!

   

ನವದೆಹಲಿ: ಭಾರತದಲ್ಲಿ ಮಾರಾಟವಾದ ಕಳಪೆ ಗುಣಮಟ್ಟದ ಕೆಮ್ಮಿನ ಸಿರಪ್‌ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದೆ. 

ಕೋಲ್ಡ್ರಿಫ್, ರೆಸ್ಪಿಫ್ರೆಶ್ ಟಿಆರ್‌, ಮತ್ತು ರಿಲೈಫ್‌ ಕಂಪನಿಗಳ ಕಲುಷಿತ ಕೆಮ್ಮಿನ ಸಿರಪ್‌ಗಳು ವಿಶ್ವದಾದ್ಯಂತ ಎಲ್ಲಿ ಪತ್ತೆಯಾದರೂ ತಕ್ಷಣ ತಿಳಿಸುವಂತೆ ಸೂಚಿಸಿದೆ.

ADVERTISEMENT

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಕಳಪೆ ಸಿರಪ್ ಸೇವನೆಯಿಂದ 5 ವರ್ಷದೊಳಗಿನ 22 ಮಕ್ಕಳು ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಡಬ್ಲ್ಯುಎಚ್‌ಒ, ವಿಶ್ವದಾದ್ಯಂತ ಈ ಎಚ್ಚರಿಕೆ ರವಾನಿಸಿದೆ.  

‘ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳು (ಎನ್‌ಆರ್‌ಎ) ತಮ್ಮ ದೇಶದಲ್ಲಿ ಕೆಮ್ಮಿನ ಕಳಪೆ ಸಿರಪ್‌ ಮಾರಾಟ ಆಗುತ್ತಿಲ್ಲ ಎನ್ನುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ಎಲ್ಲಾದರೂ ಕಂಡುಬಂದರೆ ತಕ್ಷಣವೇ ಕ್ರಮ ವಹಿಸಬೇಕು’ ಎಂದು ಡಬ್ಲ್ಯುಎಚ್‌ಒ ಹೇಳಿದೆ.  

ಕೆಮ್ಮಿನ ಕಳಪೆ ಸಿರಪ್‌ ಮಾರಾಟ ಮತ್ತು ಇಂತಹ ಸಿರಪ್‌ ಸೇವೆನೆಯಿಂದ ಮಕ್ಕಳಲ್ಲಿ ಅಡ್ಡ ಪರಿಣಾಮಗಳು ಕಂಡುಬಂದರೆ ವೈದ್ಯರು, ಆರೋಗ್ಯ ಕಾರ್ಯಕರ್ತರು ಅದನ್ನು ತಕ್ಷಣ ರಾಷ್ಟ್ರೀಯ ಔಷಧ ವಿಜಿಲೆನ್ಸ್‌ ಕೇಂದ್ರ ಮತ್ತು ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರದ ಗಮನಕ್ಕೆ ತರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಕೆಮ್ಮಿನ ಕಳಪೆ ಸಿರಪ್‌ ಪೂರೈಕೆ ಜಾಲದ ಮೇಲೆ ಕಣ್ಗಾವಲು ಇರಿಸುವಂತೆ ಮತ್ತು ಇಂತಹ ಕಳಪೆ ಉತ್ಪನ್ನದಿಂದ ಭಾದಿತವಾಗಿರುವ ಪ್ರದೇಶಗಳಲ್ಲಿ ಅತೀವ ಶ್ರದ್ಧೆ ವಹಿಸುವಂತೆಯೂ ವಿಶ್ವ ಆರೋಗ್ಯ ಸಂಸ್ಥೆ ಆಯಾ ದೇಶಗಳಿಗೆ ಸೂಚನೆ ನೀಡಿದೆ.

ಸಿರಪ್‌ನಲ್ಲಿ ‘ಡಿಇಜಿ’ ವಿಷ

ಭಾರತದಲ್ಲಿ ಸ್ರೇಸನ್‌ ಫಾರ್ಮಾಸ್ಯುಟಿಕಲ್ಸ್‌ ರೆಡ್‌ನೆಕ್ಸ್‌ ಮತ್ತು ಶೇಪ್‌ ಫಾರ್ಮಾ ತಯಾರಿಸಿದ ಕೆಮ್ಮಿನ ಸಿರಪ್‌ಗಳಲ್ಲಿ ಮಾರಣಾಂತಿಕ ವಿಷ  ಡಿ– ಎಥಿಲೀನ್ ಗ್ಲೈಕಾಲ್ (ಡಿಇಜಿ) ಇದೆ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆ (ಸಿಡಿಎಸ್‌ಸಿಒ) ವಿಶ್ವ ಆರೋಗ್ಯ ಸಂಸ್ಥೆಗೆ ಅಕ್ಟೋಬರ್‌ 8ರಂದು ಸಲ್ಲಿಸಿದ ವರದಿಯಲ್ಲಿ ಹೇಳಿತ್ತು. ಡಬ್ಲ್ಯುಎಚ್‌ಒ ಕೂಡ ಇದನ್ನು ದೃಢಪಡಿಸಿತ್ತು. ಇದರ ಬೆನ್ನಲ್ಲೇ ಈ ಸಿರಪ್‌ಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿತ್ತು. ಮಾರುಕಟ್ಟೆಯಿಂದ ಸಿರಪ್‌ ವಾಪಸ್‌ ಪಡೆಯಲು ಸರ್ಕಾರ ಆದೇಶಿಸಿತ್ತು. ಈ ಸಿರಪ್‌ಗಳನ್ನು ಭಾರತದಿಂದ ಬೇರೆಲ್ಲಿಗೂ ರಫ್ತು ಮಾಡುತ್ತಿಲ್ಲ ಎಂದು ಸಿಡಿಎಸ್‌ಸಿಒ ವಿಶ್ವ ಆರೋಗ್ಯ ಸಂಸ್ಥೆಗೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.