ADVERTISEMENT

ಗಣಿತದ ಮೇಷ್ಟ್ರು ರಿಯಾಜ್ ನೈಕೂ ಹಿಜ್ಬುಲ್ ಮುಜಾಹಿದೀನ್ ಕಾಶ್ಮೀರ ಕಮಾಂಡರ್ ಆದ ಬಗೆ

ಝುಲ್ಫೀಕರ್ ಮಜೀದ್
Published 7 ಮೇ 2020, 1:47 IST
Last Updated 7 ಮೇ 2020, 1:47 IST
ರಿಯಾಜ್ ನೈಕೂ
ರಿಯಾಜ್ ನೈಕೂ   

ಗಣಿತ ಮೇಷ್ಟ್ರಾಗಿ ಮಕ್ಕಳಿಗೆ ಪಾಠ ಮಾಡುತ್ತಿದ್ದ ಆ ವ್ಯಕ್ತಿ ಬಂದೂಕು ಹಿಡಿದ. ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ಕಮಾಂಡರ್ ಕೂಡ ಆದ. ಕೊಲೆ, ಅಪಹರಣ ಹೀಗೆ ದುಷ್ಕೃತ್ಯಗಳ ಮೇಲೆ ದುಷ್ಕೃತ್ಯ ನಡೆಸುತ್ತಾ ಕಾಶ್ಮೀರ ಕಣಿವೆಯಲ್ಲಿ ರಕ್ತಪಾತಕ್ಕೆ ಕಾರಣನಾದ. ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ರಿಯಾಜ್ ನೈಕೂನ ವೃತ್ತಾಂತವಿದು.

ಹಿಜ್ಬುಲ್ ಮುಜಾಹಿದೀನ್ ಜತೆ ನೈಕೂಗೆ ಸುದೀರ್ಘ ಅವಧಿಯಿಂದ ನಂಟಿತ್ತು. ಹಿಜ್ಬುಲ್ ಮುಖ್ಯಸ್ಥನಾಗಿದ್ದ ಬುರ್ಹಾನ್ ವಾನಿ 2016ರ ಜುಲೈ 8ರಂದು ಅನಂತನಾಗ್ ಜಿಲ್ಲೆಯ ಕೊಕರ್‌ನಾಗ್‌ನಲ್ಲಿ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ. ಅದಾದ ಬಳಿಕ ಸಂಘಟನೆಯ ಹೊಣೆ ನೈಕೂ ಹೆಗಲೇರಿತು.

ಉಗ್ರ ಚಟುವಟಿಕೆಯಲ್ಲಿ ಶಾಮೀಲಾಗುವುದಕ್ಕೂ ಮುನ್ನ ಈ ನೈಕೂ ಪುಲ್ವಾಮಾದ ಖಾಸಗಿ ಶಾಲೆಯೊಂದರಲ್ಲಿ ಗಣಿತ ಮೇಷ್ಟ್ರಾಗಿದ್ದ. 2016ರಲ್ಲಿ ಸಹವರ್ತಿಯೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ವೇಳೆ ಹಲವು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಮೊದಲ ಬಾರಿ ಉಗ್ರ ಚಟುವಟಿಕೆಯ ಸುಳಿವು ನೀಡಿದ್ದ. ಆತ ಗಾಳಿಯಲ್ಲಿ ಗುಂಡು ಹಾರಿಸುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದಾದ ಬಳಿಕ ಆತ ಅನುಸರಿಸಿರುವ ತಂತ್ರಗಳು ಅನೇಕ ಯುವಕರನ್ನು ಉಗ್ರವಾದದತ್ತ ಸೆಳೆದಿತ್ತು ಎಂಬುದು ಜಮ್ಮು–ಕಾಶ್ಮೀರ ಪೊಲೀಸರ ನಂಬಿಕೆ.

2017ರ ಆರಂಭದಲ್ಲಿ ನೈಕೂನನ್ನು ಹಿಜ್ಬುಲ್‌ನ ಕಾರ್ಯಾಚರಣೆ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿತ್ತು. ಖಿಲಾಫತ್ (ಖಲಿಫೇಟ್)ಮತ್ತು ಶರಿಯಾ (ಇಸ್ಲಾಮಿಕ್ ಕಾನೂನು) ಜಾರಿಗಾಗಿ ಹೋರಾಡುತ್ತಿದ್ದ ಉಗ್ರ ಸಂಘಟನೆಗಳ ವಿರುದ್ಧ ಹಿಜ್ಬುಲ್‌ ಸಂಘಟನೆಯನ್ನು ಗಟ್ಟಿಗೊಳಿಸುವ ಸಲುವಾಗಿ ಈತನಿಗೆ ಸಂಘಟನೆಯ ನೇತೃತ್ವ ವಹಿಸಲಾಗಿತ್ತು. ಇನ್ನೊಬ್ಬ ಕಮಾಂಡರ್ ಝಾಕಿರ್ ಮೂಸಾ ಪ್ರತ್ಯೇಕತಾವಾದಿ ನಾಯಕರಿಗೆ ಬೆದರಿಕೆ ಹಾಕುವುದರ ಜತೆಗೆ ಇಸ್ಲಾಮಿಕ್ ‘ಖಿಲಾಫತ್’ ಪರ ಮಾತನಾಡಿದ್ದು ಹಿಜ್ಬುಲ್‌ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು.

ನೈಕೂನನ್ನು ಮುಖ್ಯಸ್ಥನನ್ನಾಗಿ ಮಾಡುವ ಮೂಲಕ ಹಿಜ್ಬುಲ್ ನಾಯಕರು ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಹೊಡೆದರು. ಮೂಸಾನನ್ನು ನಿರ್ಲಕ್ಷ್ಯ ಮಾಡುತ್ತಾ ಬಂದ ನೈಕೂ, ಸಂಘಟನೆಯು ಕಾಶ್ಮೀರದಲ್ಲಿ ಇಸ್ಲಾಮಿಕ್ ಆಡಳಿತಕ್ಕಾಗಿ ಹೋರಾಡುತ್ತಿಲ್ಲ ಎಂಬ ಸಂದೇಶವನ್ನೂ ರವಾನಿಸಿದ. ನೈಕೂ ಜತೆಗಿನ ಸಂಘರ್ಷದಿಂದ ಸಂಘಟನೆ ತೊರೆದು ಬಳಿಕ ಅಲ್‌ಖೈದಾ ಸೇರಿದ್ದ ಮೂಸಾ 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದ.

ಹಿಜ್ಬುಲ್ ನೇತೃತ್ವ ವಹಿಸಿದ ಬಳಿಕ ಕಾಶ್ಮೀರ ಪಂಡಿತರನ್ನು ಕಣಿವೆಗೆ ಸ್ವಾಗತಿಸಿ ನೈಕೂ ನೀಡಿದ್ದ ಹೇಳಿಕೆ ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

‘ನಾವು ಅವರನ್ನು (ಕಾಶ್ಮೀರಿ ಪಂಡಿತರನ್ನು) ಸ್ವಾಗತಿಸುತ್ತೇವೆ. ನಮ್ಮ ಹೃದಯದಲ್ಲಿ ಅವರಿಗೆ ಎಂದೆಂದಿಗೂ ಸ್ಥಾನವಿದೆ. ಅವರೂ ನಮ್ಮ ದೇಶದ ಒಂದು ಭಾಗವಾಗಿದ್ದಾರೆ. ನಾವು ಅವರ ರಕ್ಷಕರೇ ವಿನಃ ಶತ್ರುಗಳಲ್ಲ’ ಎಂದು 2017ರಲ್ಲಿ ನೈಕೂ ಸಾಮಾಜಿಕ ಮಾಧ್ಯಮಗಳ ಮೂಲಕ ಹೇಳಿಕೆ ಬಿಡುಗಡೆ ಮಾಡಿದ್ದ.

ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನ್ವಯ ಬಂಧನಕ್ಕೊಳಗಾಗಿದ್ದ ನೈಕೂನನ್ನು 2014ರಲ್ಲಿ ಪೊಲೀಸರು ಬಿಡುಗಡೆ ಮಾಡಿದ್ದರು. ಅದಾದ ಬಳಿಕ ಕೊಲೆ, ಪೊಲೀಸ್ ಸಿಬ್ಬಂದಿಯ ಮತ್ತು ಅವರ ಕುಟುಂಬದವರ ಅಪಹರಣ ಸೇರಿ ಹಲವು ಪ್ರಕರಣಗಳಲ್ಲಿ ಆತ ಶಾಮೀಲಾಗಿದ್ದ. 2015 ಮತ್ತು 2016ರಲ್ಲಿ ಹಿಜ್ಬುಲ್‌ನ ಆಗಿನ ಕಮಾಂಡರ್ ಬುರ್ಹಾನ್ ವಾನಿ ಜತೆಗಿದ್ದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.

ಪುಲ್ವಾಮಾದ ಬೇಘ್‌ಪೊರಾ ಪ್ರದೇಶದ ನಿವಾಸಿಯಾಗಿದ್ದ ನೈಕೂ ಕಳೆದ ಕೆಲವು ವರ್ಷಗಳಲ್ಲಿ ಹಲವು ಬಾರಿ ಭದ್ರತಾಪಡೆಗಳಿಂದ ತಪ್ಪಿಸಿಕೊಂಡಿದ್ದ.

ಹಿಜ್ಬುಲ್ ಮುಜಾಹಿದೀನ್‌ ಸಂಘಟನೆ ಸಹ ಕಾಶ್ಮೀರದಲ್ಲಿನ ಉಗ್ರವಾದದಷ್ಟೇ ಹಳೆಯದ್ದು. 80ರ ದಶಕದ ಕೊನೆಯಲ್ಲಿ ಆರಂಭಗೊಂಡಿದೆ. ಬಹುತೇಕ ಸ್ಥಳೀಯ ಯುವಕರನ್ನೇ ಸದಸ್ಯರನ್ನಾಗಿ ಹೊಂದಿರುವ ಈ ಸಂಘಟನೆಯು ಪಾಕಿಸ್ತಾನ ಸೇರುವ ಪರ ಚಟುವಟಿಕೆಗಳನ್ನೇ ಸದಾ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.