ಮುಂಬೈ: ಕೇಂದ್ರ ಸರ್ಕಾರ ಪ್ರಕಟಿಸಿರುವ ಏಕಬಳಕೆ ಪ್ಲಾಸ್ಟಿಕ್‌ನ ನಿಷೇಧಿತ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂಗಳು ಸೇರ್ಪಡೆಗೊಂಡಿವೆಯೇ ಎಂಬುದರ ಕುರಿತು ವಿವರಣೆ ನೀಡುವಂತೆ ದೆಹಲಿ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಪ್ಲಾಸ್ಟಿಕ್ ಹೂವುಗಳ ಬಳಕೆ ನಿಷೇಧಿಸುವಂತೆ ಕೋರಿ ಅಖಿಲ ಭಾರತ ಹೂ ಬೆಳೆಗಾರರ ಒಕ್ಕೂಟ (ಜಿಎಫ್‌ಸಿಐ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ಭಾರತಿ ಡಾಂಗ್ರೆ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ‘ಪ್ಲಾಸ್ಟಿಕ್ ಹೂಗಳನ್ನು ಮರುಬಳಕೆ ಮಾಡಲು ಅಥವಾ ಮಣ್ಣಿನಲ್ಲಿ ಸಹಜವಾಗಿ ಕರಗಿಹೋಗುವಂತೆ ಮಾಡಲು ಸಾಧ್ಯವೇ? ಏಕೆ ಇದನ್ನು ನಿಷೇಧಿತ ಪಟ್ಟಿಗೆ ಸೇರಿಸಿಲ್ಲ’ ಎಂದು ಪ್ರಶ್ನಿಸಿತು.
ಈ ಕುರಿತು ಎರಡು ವಾರಗಳ ಒಳಗಾಗಿ ಸೂಕ್ತ ಉತ್ತರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
‘ಪ್ಲಾಸ್ಟಿಕ್ ಹೂಗಳ ಗರಿಷ್ಠ ದಪ್ಪವು 30 ಮೈಕ್ರಾನ್‌ನಷ್ಟಿರುತ್ತದೆ. 100 ಮೈಕ್ರಾನ್‌ಗಿಂತ ಕೆಳಗಿನ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಿ, ಸುತ್ತೋಲೆ ಹೊರಡಿಸಲಾಗಿದೆ. ಇದರಲ್ಲಿ ಪ್ಲಾಸ್ಟಿಕ್ ಹೂಗಳನ್ನು ಸೇರಿಸಿಲ್ಲ. ಈ ಕಾರಣದಿಂದ ಅವುಗಳನ್ನು ನಿಷೇಧಿಸಬೇಕು’ ಎಂದು ಕೋರಿ ಜಿಎಫ್‌ಸಿಐ ಅರ್ಜಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.