ADVERTISEMENT

ಯೋಜನೆಗಳಿಗೆ ಹಿಂದಿಯಲ್ಲಿಯೇ ಹೆಸರಿಡುವುದೇಕೆ; ಲೋಕಸಭೆ ಉಪಸಭಾಪತಿ ತಂಬಿದುರೈ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2018, 10:42 IST
Last Updated 12 ನವೆಂಬರ್ 2018, 10:42 IST
   

ಬೆಂಗಳೂರು: ಕೇಂದ್ರ ಸರ್ಕಾರ ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಲ್ಲಿ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಲೋಕಸಭೆ ಉಪ ಸಭಾಪತಿಎಂ.ತಂಬಿದುರೈ ದಿ ಹಿಂದುಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸೋಮವಾರ ಸಂದರ್ಶನ ಪ್ರಕಟಗೊಂಡಿದೆ.

ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾಷೆಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತ ಭಾಷೆ ಸ್ಥಾನಮಾನ ನೀಡಬೇಕು ಎಂದು ಎಐಎಡಿಎಂಕೆ ಮುಖಂಡ ಹೇಳಿದ್ದಾರೆ. ಸಂವಿಧಾನದ ಎಂಟನೇ ಪರಿಚ್ಛೇದ ವಿವಿಧ ರಾಜ್ಯ ಸರ್ಕಾರಗಳು ಬಳಸುತ್ತಿರುವ 22 ಅಧಿಕೃತ ಭಾಷೆಗಳನ್ನು ಒಳಗೊಂಡಿದೆ.

‘ಯುರೋಪ್‌ ರಾಷ್ಟ್ರಗಳಲ್ಲಿ ಕೇವಲ ಶೇ 2ರಷ್ಟು ಜನರು ಮಾತನಾಡುವ ಭಾಷೆಯನ್ನು ಅಧಿಕೃತಗೊಳಿಸಲಾಗುತ್ತದೆ. ಅದನ್ನು ನಮ್ಮ ರಾಷ್ಟ್ರದಲ್ಲಿ ಮಾಡಲು ಏಕೆ ಸಾಧ್ಯವಿಲ್ಲ?’ ಎಂದು ಸಂದರ್ಶನದಲ್ಲಿ ಪ್ರಶ್ನೆ ಮಾಡಿದ್ದಾರೆ.

ADVERTISEMENT

ಕೇಂದ್ರ ನಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಪ್ರಯತ್ನಿಸುತ್ತಿದೆ ಎಂದಿರುವ ಅವರು, ‘ತಮಿಳುನಾಡಿನಲ್ಲಿ ಯೋಜನೆಗೆ ಹಿಂದಿಯ ಹೆಸರನ್ನು ಯಾವುದಕ್ಕಾಗಿ ಇಡಬೇಕು? ಹಿಂದಿ ಭಾಷೆಯನ್ನು ಆಡುವ ಭಾಗಗಳಲ್ಲಿ ಸರ್ಕಾರದ ಕಾರ್ಯಕ್ರಮಗಳಿಗೆ ಹಿಂದಿಯಲ್ಲಿಯೇ ಹೆಸರು ಇರುವುದಕ್ಕೆ ನನ್ನ ವಿರೋಧವಿಲ್ಲ. ಉದಾಹರಣೆಗೆ, ಪ್ರಧಾನ ಮಂತ್ರಿ ಗ್ರಾಮ್ ಸಡಕ್‌ ಯೋಜನಾ; ಇಂಥ ಹೆಸರುಗಳು ಇಲ್ಲಿ ತಮಿಳುನಾಡಿನಲ್ಲಿ ನಮಗೆ ಅರ್ಥವೇ ಆಗುವುದಿಲ್ಲ’ ಎಂದಿದ್ದಾರೆ.

‘ಅಮ್ಮ(ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ) ಇರುವವರೆಗೂ, ಅವರು ಬಿಜೆಪಿ ಬಗೆಗೆ ವಿಮರ್ಶಾತ್ಮಕ ನಡೆಯನ್ನೇ ಹೊಂದಿದ್ದರು. ಪಕ್ಷದ ಪ್ರಚಾರ ಕಾರ್ಯದರ್ಶಿಯಾಗಿರುವ ನಾನು ಅಗತ್ಯ ಸಮಯದಲ್ಲಿ ಕೇಂದ್ರ ಸರ್ಕಾರದ ಟೀಕಾಕಾರನಾಗಿ ವರ್ತಿಸುತ್ತೇನೆ’ ಎಂದು ಬಿಜೆಪಿ ಬಗೆಗಿನ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

‘ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರಗಳೇ ಅನುಷ್ಠಾನಗೊಳಿಸುವುದಾದರೂ, ಕೇಂದ್ರ ಯೋಜನೆಗೆ ಅಗತ್ಯವಿರುವ ಅನುದಾನ ಹಂಚಿಕೆ ಮಾಡುತ್ತದೆ ಹಾಗೂ ಕೆಲವು ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಸೂಚಿಸುತ್ತದೆ. ಕೇಂದ್ರದಿಂದಾಗಿಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳಬಾರದು...’

‘ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಎಐಎಡಿಎಂಕೆಗೆ ಮಹತ್ವ ನೀಡುತ್ತವೆ, ಉಳಿದ ಸಮಯದಲ್ಲಿ ನಮಗೆ ಅದೇ ಪ್ರಾಮುಖ್ಯತೆ ನೀಡುವುದಿಲ್ಲ’ ಎಂದು ತಂಬಿದುರೈ ರಾಜಕೀಯ ರಂಗದ ಹಲವು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.