ADVERTISEMENT

ತಮಿಳುನಾಡಲ್ಲಿ ಸಂಚಲನ ಸೃಷ್ಟಿಸಿದ ಆಡಿಯೊ: ಸಕ್ರಿಯ ರಾಜಕಾರಣಕ್ಕೆ ಶಶಿಕಲಾ?

ಪ್ರಜಾವಾಣಿ ವಿಶೇಷ
Published 30 ಮೇ 2021, 9:42 IST
Last Updated 30 ಮೇ 2021, 9:42 IST
ವಿ.ಕೆ ಶಶಿಕಲಾ
ವಿ.ಕೆ ಶಶಿಕಲಾ    

ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ದೀರ್ಘಕಾಲದ ಒಡನಾಡಿ ವಿ.ಕೆ ಶಶಿಕಲಾ ಅವರು ಸಕ್ರಿಯ ರಾಜಕಾರಣಕ್ಕೆ ಬರುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ನಡುವಿನ ಬಣ ರಾಜಕೀಯದಿಂದ ಕಂಗೆಟ್ಟಿರುವ ಎಐಎಡಿಎಂಕೆ ಅನ್ನು ಸರಿ ದಾರಿಗೆ ತರುವ ಸಲುವಾಗಿ ಅವರು ಮರಳಿ ರಾಜಕೀಯ ಪ್ರವೇಶಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

'ಪಳನಿಸ್ವಾಮಿ ಮತ್ತು ಪನ್ನೀರ್‌ಸೆಲ್ವಂ ನಡುವಿನ ಬಹಿರಂಗ ಕಿತ್ತಾಟದಿಂದ ನಾನು ಬೇಸರಗೊಂಡಿದ್ದೇನೆ. ಕೋವಿಡ್ -19 ಸಾಂಕ್ರಾಮಿಕ ಒಂದು ಹಂತಕ್ಕೆ ಬಂದ ಕೂಡಲೇ ಸಕ್ರಿಯ ರಾಜಕಾರಣಕ್ಕೆ ಬರುತ್ತೇನೆ,' ಎಂದು ಶಶಿಕಲಾ ಅವರು ತಮ್ಮ ಬೆಂಬಲಿಗರೊಂದಿಗೆ ಮಾತನಾಡಿರುವ ದೂರವಾಣಿ ಸಂಭಾಷಣೆಯ ಆಡಿಯೊ ಮಾಧ್ಯಮಗಳ ಮೂಲಕ ಬಹಿರಂಗವಾಗಿದೆ.

ADVERTISEMENT

'ಚಿಂತೆ ಮಾಡಬೇಡಿ. ಎಐಎಡಿಎಂಕೆಯನ್ನು ಸರಿದಾರಿಗೆ ತರಲು ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಬರುತ್ತೇನೆ. ಕೋವಿಡ್ ಸಾಂಕ್ರಾಮಿಕ ಅಂತ್ಯವಾಗುತ್ತಲೇ ನಾನು ಬರುತ್ತೇನೆ,' ಎಂದು ಶಶಿಕಲಾ ಅವರು ಬೆಂಬಲಿಗ ಲಾರೆನ್ಸ್‌ಗೆ ಹೇಳಿರುವುದು ಆಡಿಯೊದಲ್ಲಿದೆ.

'ಒಂದೊಳ್ಳೆ ನಿರ್ಧಾರವನ್ನು ನಾನು ಶೀಘ್ರದಲ್ಲೇ ಪ್ರಕಟಿಸುತ್ತೇನೆ. ಶೀಘ್ರದಲ್ಲೇ ಬರುತ್ತೇನೆ. ನಾನು ಬರುವುದು ನಿಶ್ಚಿತ. ಅವರು ಬಹಿರಂಗವಾಗಿ ಕಿತ್ತಾಡುತ್ತಿದ್ದಾರೆ. ಇದು ನನಗೆ ನೋವುಂಟುಮಾಡಿದೆ. ಪಕ್ಷಕ್ಕಾಗಿ ನಾವು ತ್ಯಾಗ ಮಾಡಿದ್ದೇವೆ. ಆದರೆ, ಈಗ ಪಕ್ಷ ಹಾಳಾಗುತ್ತಿರುವುದನ್ನು ನೋಡಿಕೊಂಡು ಸುಮ್ಮನಿರಲಾಗುವುದಿಲ್ಲ,' ಎಂದು ತಂಜಾವೂರಿನ ಸುರೇಶ್‌ ಎಂಬುವರೊಂದಿಗೆ ಮಾತನಾಡಿರುವ ಮತ್ತೊಂದು ದೂರವಾಣಿ ಸಂಭಾಷಣೆಯೂ ಬಹಿರಂಗವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ 'ಅಮ್ಮಾ ಮಕ್ಕಳ್‌ ಮುನ್ನೇತ್ರ ಕಳಗಂನ (ಎಎಂಎಂಕೆ)' ಮೂಲಗಳು, 'ಆಡಿಯೊ ಅಸಲಿಯದ್ದು. ಎಐಎಡಿಎಂಕೆಯ ಬೆಳವಣಿಗೆಗಳನ್ನು ತೀರ ಹತ್ತಿರದಿಂದ ಗಮನಿಸುತ್ತಿರುವ ಶಶಿಕಲಾ ಒಂದೆರಡು ತಿಂಗಳ ನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ, ಎಂದು ಮಾಹಿತಿ ನೀಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.