ADVERTISEMENT

ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿಲ್ಲ: ಜಾವಡೇಕರ್

‘ಅಪಪ್ರಚಾರ: ಸಮೀಕ್ಷೆಗಳ ಬಣ್ಣ ಬಯಲು ಮಾಡುವೆ’

ಪಿಟಿಐ
Published 3 ಮೇ 2020, 19:30 IST
Last Updated 3 ಮೇ 2020, 19:30 IST
ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌
ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌   

ನವದೆಹಲಿ: ‘ಭಾರತದಲ್ಲಿ ಮಾಧ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯ. ಆದರೆ, ಈ ವಿಷಯದಲ್ಲಿ ದೇಶದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಸಮೀಕ್ಷೆಗಳ ಬಣ್ಣ ಬಯಲು ಮಾಡುತ್ತೇವೆ’ ಎಂದು ವಾರ್ತಾ ಮತ್ತು ಪ್ರಚಾರ ಸಚಿವ ಪ್ರಕಾಶ ಜಾವಡೇಕರ್‌ ಭಾನುವಾರ ಹೇಳಿದ್ದಾರೆ.

‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ’ದ ಅಂಗವಾಗಿ ಅವರು ಟ್ವೀಟ್‌ ಮಾಡಿದ್ದಾರೆ. ‘ಜನರಿಗೆ ಮಾಹಿತಿ ನೀಡಿ, ಅವರನ್ನು ಜಾಗೃತರನ್ನಾಗಿಸುವ ಶಕ್ತಿ ಮಾಧ್ಯಮಕ್ಕಿದೆ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ರಿಪೋರ್ಟರ್ಸ್‌ ವಿದೌಟ್‌ ಬಾರ್ಡರ್ಸ್‌’ ಎಂಬ ಸಂಸ್ಥೆಯ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯಲ್ಲಿ, ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನದಷ್ಟು ಕೆಳಕ್ಕಿಳಿದಿದೆ. 180 ದೇಶಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಭಾರತಕ್ಕೆ 142ನೇ ಸ್ಥಾನ ದೊರೆತಿದೆ.

ADVERTISEMENT

‘ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಸ್ವಾತಂತ್ರ್ಯವನ್ನು ಬಿಜೆಪಿ ದಮನ ಮಾಡುತ್ತಿದೆ. ಇದಕ್ಕೆ ನಾವು ಅವಕಾಶ ಕೊಡಬಾರದು’ ಎಂದು ಕಾಂಗ್ರೆಸ್‌ ಪಕ್ಷ ಟ್ವೀಟ್‌ ಮಾಡಿದೆ.

‘ಜನರಲ್ಲಿ ಅಭಿಪ್ರಾಯ ಮೂಡಿಸಿ, ಅವರನ್ನು ಜಾಗೃತರನ್ನಾಗಿಸುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಾಧ್ಯಮದ ಪಾತ್ರ ದೊಡ್ಡದು. ಕೋವಿಡ್‌–19 ಕುರಿತು ಜನರಲ್ಲಿ ಅರಿವು, ಜಾಗೃತಿ ಮೂಡಿಸಲು, ಅಪಾಯವನ್ನು ಲೆಕ್ಕಿಸದೇ ಕಾರ್ಯ ನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ನಾನು ನಮಿಸುತ್ತೇನೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.