ADVERTISEMENT

ಎಸ್‌ಪಿ ಅಭ್ಯರ್ಥಿಗಳನ್ನು ಸೋಲಿಸಲು ಯಾವ ಪಕ್ಷಕ್ಕಾದರೂ ಮತ ಹಾಕುತ್ತೇವೆ: ಮಾಯಾವತಿ

ಪಿಟಿಐ
Published 29 ಅಕ್ಟೋಬರ್ 2020, 10:09 IST
Last Updated 29 ಅಕ್ಟೋಬರ್ 2020, 10:09 IST
ಮಾಯಾವತಿ
ಮಾಯಾವತಿ   

ನವದೆಹಲಿ: ‘ರಾಜ್ಯಸಭೆ ಹಾಗೂ ವಿಧಾನಪರಿಷತ್ ಸೇರಿದಂತೆ, ಭವಿಷ್ಯದ ಎಲ್ಲ ಚುನಾವಣೆಗಳಲ್ಲೂ ಸಮಾಜವಾದಿ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ನಮ್ಮ ಪಕ್ಷ ಬಿಜೆಪಿ ಅಥವಾ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಬೇಕಾದರೂ ಮತ ಹಾಕಲಿದೆ‘ ಎಂದು ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ತಮ್ಮ ಶಾಸಕರು ‘ಪಕ್ಷಾಂತರ‘ ಮಾಡಬಹುದೆಂಬ ಊಹಾಪೋಹಗಳ ನಡುವೆಯೇ ಮಾಯಾವತಿಯವರು, ‘ಸಮಾಜವಾದಿ ಪಕ್ಷವನ್ನು ಸೋಲಿಸಲು ನಮ್ಮ ಪಕ್ಷವು ಎಲ್ಲ ಪ್ರಯತ್ನಗಳನ್ನೂ ಮಾಡಲಿದೆ. ಬಿಜೆಪಿ ಅಥವಾ ಇತರ ಯಾವುದೇ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕುವ ಸಾಧ್ಯತೆಯನ್ನೂ ಅಲ್ಲಗಳೆಯುವುದಿಲ್ಲ‘ ಎಂದು ಹೇಳಿದ್ದಾರೆ.

‘ಸಮಾಜವಾದಿ ಪಕ್ಷದ ಅಭ್ಯರ್ಥಿಯ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಅಭ್ಯರ್ಥಿಗೆ ಬಿಎಸ್‌ಪಿ ಶಾಸಕರ ಮತ ಸಿಗುತ್ತದೆ‘ ಎಂದು ಮಾಯಾವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಬಿಎಸ್‌ಪಿಯ ಆರು ಶಾಸಕರು ಬುಧವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿ, ಪಕ್ಷಾಂತರದ ಸುಳಿವು ನೀಡಿದ ನಂತರ, ಮಾಯಾವತಿ ಈ ಹೇಳಿಕೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಖಾಲಿ ಇರುವ 10 ರಾಜ್ಯಸಭಾ ಸ್ಥಾನಗಳಿಗೆ ನವೆಂಬರ್ 9ರಂದು ಚುನಾವಣೆ ನಡೆಯಲಿದೆ. ಬಿಎಸ್‌ಪಿಯಿಂದ ರಾಜ್ಯಸಭೆಗೆ ರಾಮ್ಜಿ ಗೌತಮ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಆದರೆ ಅರ್ಜಿಯಲ್ಲಿ, ತಮ್ಮ ಸಹಿಗಳನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿ ಪಕ್ಷದ ನಾಲ್ವರು ಬಂಡಾಯ ಅಭ್ಯರ್ಥಿಗಳು ಅಫಿಡವಿಟ್‌ ಸಲ್ಲಿಸಿದ್ದಾರೆ. ಆದರೆ, ರಿಟರ್ನಿಂಗ್ ಆಫೀಸರ್ ಅವರು ಗೌತಮ್ ಅವರ ನಾಮನಿರ್ದೇಶನವನ್ನು ಇನ್ನೂ ಸ್ವೀಕರಿಸದ ಕಾರಣ, ಈ ಪ್ರಯತ್ನ ಯಶಸ್ವಿಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.