ADVERTISEMENT

ಕೇರಳದಲ್ಲಿ ತಾವರೆಗೆ ಗುಲಾಬಿ ಹೂವಿನ ಕಾಟ!

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 5:15 IST
Last Updated 27 ನವೆಂಬರ್ 2020, 5:15 IST
ಬಿಜೆಪಿ ಚಿನ್ಹೆ
ಬಿಜೆಪಿ ಚಿನ್ಹೆ   

ತಿರುವನಂತಪುರಂ: ತಿರುವನಂತಪುರ ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹುಮ್ಮಸ್ಸಿನೊಂದಿಗೆ ಚುನಾವಣೆಗೆ ಇಳಿದಿರುವ ಬಿಜೆಪಿಗೆ ಗುಲಾಬಿ ಹೂವಿನ ಕಾಟ ಎದುರಾಗಿದೆ.

2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಿರುವನಂತಪುರ ಪಾಲಿಕೆಯ ನೂರು ಸ್ಥಾನಗಳಲ್ಲಿ 35 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2010ರ ಚುನಾವಣೆಯಲ್ಲಿ ಬಿಜೆಪಿ ಕೇವಲ 10 ಸ್ಥಾನಗಳನ್ನು ಪಡೆದಿತ್ತು. ಹೀಗಾಗಿ ಈ ಬಾರಿ ಸಿಪಿಎಂ ನೇತೃತ್ವದ ಎಡಪಕ್ಷದ ಎರಡು ದಶಕಗಳ ಅಧಿಕಾರವನ್ನು ಕೊನೆಗಾಣಿಸುತ್ತೇವೆ ಎನ್ನುವ ಹುಮ್ಮಸ್ಸಿನಿಂದಲೇ ಬಿಜೆಪಿ ಕಣಕ್ಕೆ ಇಳಿದಿದೆ. ಆದರೆ, ಬಿಜೆಪಿ ಅಭ್ಯರ್ಥಿಗಳ ಹೆಸರನ್ನೇ ಹೊಂದಿರುವ ಅಭ್ಯರ್ಥಿಗಳು ಗುಲಾಬಿ ಹೂವಿನ ಚಿನ್ಹೆಯನ್ನು ಪಡೆದು ಕಣಕ್ಕೆ ಇಳಿದಿದ್ದು, ಬಿಜೆಪಿಗೆ ಇದು ತಲೆನೋವಾಗಿದೆ.

‘ಚುನಾವಣೆ ಕಾರ್ಯದಲ್ಲಿ ತೊಡಗಿರುವ, ಎಡಪಕ್ಷಕ್ಕೆ ಬೆಂಬಲ ನೀಡುವ ಸಿಬ್ಬಂದಿ ಹಾಗೂ ಕೇರಳ ರಾಜ್ಯ ಚುನಾವಣಾ ಆಯೋಗವು ಬೇಕೆಂದೇ ಈ ರೀತಿ ಗೆಲುವು ಸಾಧಿಸಲು ಸಾಧ್ಯವೇ ಇಲ್ಲದ ಅಭ್ಯರ್ಥಿಗಳಿಗೆ ಗುಲಾಬಿ ಹೂವಿನ ಚಿನ್ಹೆ ನೀಡಿದೆ’ ಎಂದು ಬಿಜೆಪಿ ಆರೋಪಿಸಿದೆ.

ADVERTISEMENT

ಕನಿಷ್ಠ 11 ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಯ ಹೆಸರಿನ ಪಕ್ಷೇತರ ಅಭ್ಯರ್ಥಿಗಳಿದ್ದು, ಇವರೆಲ್ಲರ ಚಿನ್ಹೆಯೂ ಗುಲಾಬಿ ಹೂವಾಗಿದೆ. ತಿರುವನಂತಪುರ ಜಿಲ್ಲೆಯ ಇತರೆ ನಾಲ್ಕು ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ ಅಭ್ಯರ್ಥಿಯ ಹೆಸರಿನ ಪಕ್ಷೇತರ ಅಭ್ಯರ್ಥಿಗಳಿದ್ದು, ಅವರ ಚಿನ್ಹೆಯೂ ಗುಲಾಬಿ ಹೂವಾಗಿದೆ. ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಪಕ್ಷಗಳ ಹೆಸರಿನ ಮೇಲೆ ಇವಿಎಂಗಳಲ್ಲಿ ಮೇಲಿಂದ ಕೆಳಗೆ ಪಟ್ಟಿ ಇದ್ದರೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಹೆಸರಿನ ಅನ್ವಯ ಇವಿಎಂನಲ್ಲಿ ಪಟ್ಟಿ ಇರುತ್ತದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಹಾಗೂ ಪಕ್ಷೇತರ ಅಭ್ಯರ್ಥಿಯ ಹೆಸರು ಜೊತೆಜೊತೆಯಾಗಿ ಬರಲಿದೆ. ಇದು ಮತದಾರರಿಗೆ ಗೊಂದಲ ಉಂಟು ಮಾಡಲಿದ್ದು, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಅಡ್ಡಿಯಾಗಲಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯ ಈ ಆರೋಪವನ್ನು ಚುನಾವಣಾ ಆಯೋಗ ತಳ್ಳಿ ಹಾಕಿದ್ದು, ‘ಗುಲಾಬಿ ಹೂವಿನ ಚಿನ್ಹೆ ಹಲವು ವರ್ಷದಿಂದ ಇದ್ದು, ಅಭ್ಯರ್ಥಿಗಳ ಮನವಿ ಮೇರೆಗೆ ಅದನ್ನು ನೀಡಲಾಗುತ್ತದೆ. ಆಯೋಗದ ವಿರುದ್ಧದ ಆರೋಪ ಆಧಾರರಹಿತ’ ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.