ADVERTISEMENT

ಲಾಕ್‌ಡೌನ್‌ ಮಾಡಿದ ಪ್ರಧಾನಿ ನಿರ್ಧಾರ ಸ್ವಾಗತಾರ್ಹ: ಮೋದಿಗೆ ಸೋನಿಯಾ ಗಾಂಧಿ ಪತ್ರ 

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2020, 7:33 IST
Last Updated 26 ಮಾರ್ಚ್ 2020, 7:33 IST
   

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶವನ್ನು 21 ದಿನಗಳ ಕಾಲ ಲಾಕ್‌ಡೌನ್‌ ಮಾಡುವ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಕೊರಿನಾ ವೈರಸ್‌ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ಅವರ ಈ ನಡೆ ಸ್ವಾಗತಾರ್ಹ ಎಂದಿದ್ದಾರೆ.

‘ಕೊರೊನಾ ವೈರಸ್‌ ತಡೆಯುವ ನಿಟ್ಟಿನಲ್ಲಿ ದೇಶವನ್ನು 21 ದಿನಗಳ ಲಾಕ್‌ ಡೌನ್‌ ಮಾಡಲು ನೀವು ಕೈಗೊಂಡಿರುವ ನಿರ್ಧಾರ ಸ್ವಾಗತಾರ್ಹ. ನಿಮ್ಮ ನಿರ್ಧಾರವನ್ನು ಕಾಂಗ್ರೆಸ್‌ನ ಅಧ್ಯಕ್ಷೆಯಾದ ನಾನು ಬೆಂಬಲಿಸುತ್ತೇನೆ. ಅಲ್ಲದೆ, ಕೊರೊನಾ ವೈರಸ್‌ ವಿರುದ್ದ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ನನ್ನ ಸಹಮತವಿದೆ,’ ಎಂದು ಅವರು ಪತ್ರ ಬರೆದಿದ್ದಾರೆ.

ಇದೇ ವೇಳೆ ಸರ್ಕಾರಕ್ಕೆ ಅವರು ಕೆಲವೊಂದು ಸಲಹೆಗಳನ್ನೂ ನೀಡಿದ್ದಾರೆ. ಬ್ಯಾಂಕ್‌ಗಳಿಗೆ ಪಾವತಿಸಬೇಕಿರುವ ಸಾಲದ ಕಂತುಗಳಿಗೆ ಆರು ತಿಂಗಳ ವಿನಾಯಿತಿ ಮಾಡಬೇಕು, ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

ಕೊರೊನಾ ವಿರುದ್ಧ ಹೋರಾಡಲು ಆರ್ಥಿಕ ಮತ್ತು ವೈದ್ಯಕೀಯ ಮಾರ್ಗಗಳನ್ನು ಅನುಸರಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಅಸಂಘಟಿಕ ವಲಯದ ಕೃಷಿ ಕಾರ್ಮಿಕರು, ದಿನಗೂಲಿ ನೌಕರರು, ನರೇಗಾ ನೋಂದಾಯಿತರಿಗೆ, ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ನೇರವಾಗಿ ಹಣ ಪಾವತಿ ಮಾಡುವ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಅಸಂಘಟಿಕ ವಲಯಕ್ಕೆ ಕನಿಷ್ಠ ಆದಾಯ ಕಲ್ಪಿಸುವ ಕಾಂಗ್ರೆಸ್‌ನ ‘ನ್ಯಾಯ್‌’ ಪರಿಕಲ್ಪನೆಯನ್ನು ಜಾರಿ ತರುವುದು ಈ ಹೊತ್ತಿನ ಅಗತ್ಯ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಕಿಸಾನ್‌ ಯೋಜನೆ ಖಾತೆದಾರರಿಗೆ, ಜನಧನ ಖಾತೆದಾರರಿಗೆ, ಹಿರಿಯ ನಾಗರಿಕರಿಗೆ, ವಿದವೆಯರಿಗೆ, ಅಂಗವಿಕಲರ ಖಾತೆಗಳಿಗೆ ₹7500ಗಳ ನೆರವಿನ ಹಣ ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.