ಕೋಲ್ಕತ್ತ: ‘ಇಂಡಿಯಾ’ ಮೈತ್ರಿಕೂಟ ಕೆಲಸ ಮಾಡುತ್ತಿರುವ ಬಗೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಅವಕಾಶ ದೊರೆತರೆ ಮೈತ್ರಿಕೂಟದ ನಾಯಕತ್ವವನ್ನು ತಾವು ವಹಿಸಿಕೊಳ್ಳಲು ಸಿದ್ಧ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯ ಹೊಣೆ ಹಾಗೂ ‘ಇಂಡಿಯಾ’ ಮೈತ್ರಿಕೂಟವನ್ನು ಮುನ್ನಡೆಸುವ ಹೊಣೆಯನ್ನು ತಾವು ಏಕಕಾಲದಲ್ಲಿ ನಿರ್ವಹಿಸಲು ಸಾಧ್ಯವಿದೆ ಎಂದೂ ಮಮತಾ ಅವರು ಶುಕ್ರವಾರ ಹೇಳಿದ್ದಾರೆ.
‘ಇಂಡಿಯಾ ಮೈತ್ರಿಕೂಟವನ್ನು ನಾನು ರೂಪಿಸಿದ್ದೆ. ಈಗ ಅದನ್ನು ನಿರ್ವಹಿಸುವ ಹೊಣೆಯು ಮೈತ್ರಿಕೂಟವನ್ನು ಮುನ್ನಡೆಸುತ್ತಿರುವವರ ಮೇಲಿದೆ. ಅವರಿಗೆ ನಿರ್ವಹಣೆ ಸಾಧ್ಯವಿಲ್ಲ ಎಂದಾದರೆ ನಾನೇನು ಮಾಡಲಿ? ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಬೇಕು ಎಂದು ನಾನು ಹೇಳುತ್ತೇನೆ’ ಎಂದು ಮಮತಾ ಅವರು ಬಂಗಾಳಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ತಮಗೆ ಬಿಜೆಪಿಯನ್ನು ವಿರೋಧಿಸುವ ಬಲಿಷ್ಠ ನಾಯಕಿ ಎಂಬ ಹೆಗ್ಗಳಿಕೆ ಇರುವಾಗ, ‘ಇಂಡಿಯಾ’ ಮೈತ್ರಿಕೂಟದ ನಾಯಕತ್ವವನ್ನು ವಹಿಸಿಕೊಳ್ಳದೆ ಇರುವುದಕ್ಕೆ ಕಾರಣ ಏನು ಎಂಬ ಪ್ರಶ್ನೆಗೆ ಮಮತಾ ಅವರು, ‘ಅವಕಾಶ ದೊರೆತರೆ ಮೈತ್ರಿಕೂಟವು ಸುಗಮವಾಗಿ ಕಾರ್ಯನಿರ್ವಹಿಸುವಂತೆ ನಾನು ನೋಡಿಕೊಳ್ಳುತ್ತೇನೆ’ ಎಂದಿದ್ದಾರೆ.
‘ನನಗೆ ಪಶ್ಚಿಮ ಬಂಗಾಳದಿಂದ ಹೊರಗಡೆ ಹೋಗಲು ಇಷ್ಟವಿಲ್ಲ. ಆದರೆ ನಾನು ಇಲ್ಲಿಂದಲೇ ಮೈತ್ರಿಕೂಟವನ್ನು ನಡೆಸಬಲ್ಲೆ’ ಎಂದಿದ್ದಾರೆ.
ಬಿಜೆಪಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಲ್ಲಿ 24ಕ್ಕೂ ಹೆಚ್ಚು ಪಕ್ಷಗಳು ಇವೆ. ಆದರೆ ಪಕ್ಷಗಳ ನಡುವೆ ಸಮನ್ವಯ ಇಲ್ಲ ಎಂಬ ಟೀಕೆಯು ಈ ಮೈತ್ರಿಕೂಟದ ಕುರಿತಾಗಿ ಇದೆ.
‘ಇಂಡಿಯಾ’ ಮೈತ್ರಿಕೂಟದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬದಿಗೆ ತಳ್ಳಬೇಕು, ಮಮತಾ ಬ್ಯಾನರ್ಜಿ ಅವರನ್ನು ತಮ್ಮ ನಾಯಕಿ ಎಂದು ಸ್ವೀಕರಿಸಬೇಕು ಎಂದು ಟಿಎಂಸಿ ಸಂಸದ ಕಲ್ಯಾಣ‌್ ಬ್ಯಾನರ್ಜಿ ಅವರು ಹೇಳಿಕೆ ನೀಡಿದ ಎರಡು ದಿನಗಳ ನಂತರ ಮಮತಾ ಈ ಮಾತುಗಳನ್ನು ಆಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದ ಉಪ ಚುನಾವಣೆಯಲ್ಲಿ ಟಿಎಂಸಿ ಪಕ್ಷವು ಉತ್ತಮ ಸಾಧನೆ ತೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.