
ನವದೆಹಲಿ (ಪಿಟಿಐ): ಆನ್‌ಲೈನ್ ಗೇಮಿಂಗ್ ಅಪ್ಲಿಕೇಶನ್ ವಿನ್ಜೋ ಹಾಗೂ ಅದರ ಪ್ರವರ್ತಕರ ವಿರುದ್ಧದ ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಪಟ್ಟಿ ಸಲ್ಲಿಸಿರುವುದಾಗಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ವಿನ್ಜೋ ಆ್ಯಪ್‌ನಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಕಂಪ್ಯೂಟರ್ ನಿಯಂತ್ರಿತ ಬಾಟ್‌ಗಳ ಮೂಲಕ ಆಟದ ಸ್ವರೂಪವನ್ನೇ ಬದಲಿಸಿ, ಬಳಕೆದಾರರನ್ನು ವಂಚಿಸಲಾಗಿದೆ. ಇದರಿಂದ ಆಟಗಾರರು ₹734 ಕೋಟಿ ಕಳೆದುಕೊಂಡಿದ್ದಾರೆ ಎಂದೂ ಆರೋಪ ಪಟ್ಟಿಯಲ್ಲಿ ಇ.ಡಿ ಉಲ್ಲೇಖಿಸಿದೆ.
ವಿನ್ಜೋ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾದ ಪವನ್ ನಂದಾ, ಸೌಮ್ಯಾ ಸಿಂಗ್ ರಾಥೋಡ್ ಹಾಗೂ ವಿನ್ಜೊ ಯುಎಸ್, ವಿನ್ಜೋ ಎಸ್‌ಜಿ ಸೇರಿದಂತೆ ವಿನ್ಜೊ ಒಡೆತನದ ವಿದೇಶದಲ್ಲಿರುವ ಅಂಗಸಂಸ್ಥೆಗಳನ್ನೂ ಆರೋಪಿಗಳೆಂದು ಪಟ್ಟಿಯಲ್ಲಿ ಹೆಸರಿಸಲಾಗಿದೆ.
ವಿನ್ಜೋದಲ್ಲಿ ಆಟವಾಡುವ ಬಳಕೆದಾರರಿಗೆ ಅವರು ಮತ್ತೊಬ್ಬ ನೈಜ ಬಳಕೆದಾರನ ಜತೆಗೆ ಆಟವಾಡುತ್ತಿರುವಂತೆ ಬಿಂಬಿಸಿ, ಅವರ ಗಮನಕ್ಕೆ ಬಾರದಂತೆ ಎದುರಾಳಿ ಆಟಗಾರನ ಜಾಗಕ್ಕೆ ಬಾಟ್‌ಗಳನ್ನು ಸ್ಥಾಪಿಸಿದೆ. ಜತೆಗೆ ಆಟಗಾರರು ಈ ಹಿಂದಿನ ಆಟಗಳನ್ನು ಹೇಗೆ ಆಡಿದ್ದಾರೆ ಎಂಬ ದತ್ತಾಂಶಗಳನ್ನೆಲ್ಲಾ ಪಡೆದು ಅವರನ್ನು ಸೋಲಿಸಿ, ಹಣ ದೋಚಲಾಗಿದೆ ಎಂದು ಇ.ಡಿ.ತಿಳಿಸಿದೆ.
ಈ ಮಾದರಿಯಲ್ಲಿ ಸಂಸ್ಥೆಯು 2021–22 ಹಾಗೂ 2025–26ರ ಆರ್ಥಿಕ ವರ್ಷದಲ್ಲಿ 3,522.05 ಅಕ್ರಮ ಆದಾಯವನ್ನು ಗಳಿಸಿದೆ. ವಿದೇಶದಲ್ಲಿರುವ ತನ್ನ ಅಂಗ ಸಂಸ್ಥೆಗಳ ಮೂಲಕ ಈ ಹಣವನ್ನು ವರ್ಗಾಯಿಸಲಾಗಿದೆ ಎಂದೂ ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.