ADVERTISEMENT

ಅಂಧೇರಿ ಉಪ ಚುನಾವಣೆ: ನಾಮಪತ್ರ ಹಿಂಪಡೆಯುವಂತೆ ಬಿಜೆಪಿಗೆ ಪವಾರ್‌ ಮನವಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2022, 19:31 IST
Last Updated 16 ಅಕ್ಟೋಬರ್ 2022, 19:31 IST
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌
ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌   

ಮುಂಬೈ: ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಮತ್ತು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ಅವರು ಅಂಧೇರಿ ಪೂರ್ವ ವಿಧಾನಸಭೆ ಕ್ಷೇತ್ರದ ಉಪ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿಗೆ ಭಾನುವಾರ ಮನವಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ಶಿವಸೇನಾ ಶಾಸಕ ರಮೇಶ್‌ ಲಟ್ಕೆ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಪತ್ನಿರುತುಜಾ ಅವರು ಉದ್ಧವ್‌ ಬಣದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಅವರಿಗೆ ಎನ್‌ಸಿಪಿ ಬೆಂಬಲ ಸೂಚಿಸಿದೆ. ರುತುಜಾ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಮುರ್ಜಿ ಪಟೇಲ್‌ ಕಣಕ್ಕಿಳಿದಿದ್ದು, ನವೆಂಬರ್‌ 3ರಂದು ಚುನಾವಣೆ ನಿಗದಿಯಾಗಿದೆ.

‘ಶಾಖಾ ಪ್ರಮುಖರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ರಮೇಶ್‌ ಅವರು ಎರಡು ಬಾರಿ ಶಾಸಕರಾಗಿದ್ದವರು. ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಅವರ ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಉತ್ತಮ’ ಎಂದು ರಾಜ್‌ ಠಾಕ್ರೆ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ಗೆ ಪತ್ರ ಬರೆದಿದ್ದಾರೆ.

ADVERTISEMENT

‘ಚುನಾವಣೆಯಲ್ಲಿ ಗೆದ್ದವರ ಅಧಿಕಾರಾವಧಿ ಒಂದೂವರೆ ವರ್ಷ ಮಾತ್ರ. ರಮೇಶ್‌ ಅವರಿಂದ ತೆರವಾಗಿರುವ ಸ್ಥಾನಕ್ಕೆ ಅವರ ಪತ್ನಿ ಸ್ಪರ್ಧಿಸುತ್ತಿದ್ದಾರೆ. ರಮೇಶ್‌ ಅವರ ಕೊಡುಗೆಗಳನ್ನು ಪರಿಗಣಿಸಿ ಅವರ ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡಬೇಕು’ ಎಂದು ಪವಾರ್‌ ತಿಳಿಸಿದ್ದಾರೆ.

ಪವಾರ್‌ ನಡೆಯನ್ನು ಸ್ವಾಗತಿಸಿರುವ ಉದ್ಧವ್‌ ಠಾಕ್ರೆ, ‘ಪವಾರ್‌ ಅವರು ಮಹಾರಾಷ್ಟ್ರದ ರಾಜಕೀಯ ಪರಂಪರೆಯನ್ನು ಮತ್ತೊಂದು ಮಗ್ಗುಲಿಗೆ ತೆಗೆದುಕೊಂಡು ಹೋಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಪಕ್ಷದ ಅಭ್ಯರ್ಥಿಯ ನಾಮಪತ್ರ ಹಿಂಪಡೆಯುವ ವಿಚಾರದಲ್ಲಿ ಏಕಾಂಗಿಯಾಗಿ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಪಕ್ಷದ ವರಿಷ್ಠರು, ಮುಖಂಡರು, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಜೊತೆ ಸಮಾಲೋಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಫಡಣವೀಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.