ADVERTISEMENT

ಅಯ್ಯಪ್ಪ ಸಮ್ಮೇಳನ: ದೇಗುಲ ಪ್ರವೇಶಿಸಿದ್ದ ಮಹಿಳೆ ಭಾಗವಹಿಸುವುದಕ್ಕೆ ವಿರೋಧ

ಏಜೆನ್ಸೀಸ್
Published 12 ಆಗಸ್ಟ್ 2025, 15:43 IST
Last Updated 12 ಆಗಸ್ಟ್ 2025, 15:43 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ತಿರುವನಂತಪುರ: ಕೇರಳದಲ್ಲಿ 2019ರಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಶಬರಿಮಲೆ  ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ಪ್ರಕರಣವು ಈಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಅಂದು ದೇವಸ್ಥಾನ ಪ್ರವೇಶಿಸಿದ್ದ  ಹೋರಾಟಗಾರ್ತಿಯೊಬ್ಬರಿಗೆ ಇದೇ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ  ‘ಜಾಗತಿಕ ಅಯ್ಯಪ್ಪ ಸಮ್ಮೇಳನ’ದಲ್ಲಿ ಭಾಗವಹಿಸಲು ಸಿಪಿಎಂ ನೇತೃತ್ವದ ಕೇರಳ ಸರ್ಕಾರ ಅವಕಾಶ ಕಲ್ಪಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಮತ್ತು ಸಂಘ ಪರಿವಾರ ಆಕ್ರೋಶ ವ್ಯಕ್ತಪಡಿಸಿವೆ.

‘ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) 75ನೇ ವಾರ್ಷಿಕೋತ್ಸವದ ಅಂಗವಾಗಿ ಪಂಪಾ ನದಿ ತೀರದಲ್ಲಿ ಜಾಗತಿಕ ಅಯ್ಯಪ್ಪ ಸಮ್ಮೇಳನವನ್ನು ಆಯೋಜಿಸಲು ಸಿದ್ಧತೆಗಳು ನಡೆದಿವೆ. ಶಬರಿಮಲೆ ದೇವಸ್ಥಾನವನ್ನು ಜಾಗತಿಕ ಯಾತ್ರಾ ಕೇಂದ್ರವನ್ನಾಗಿಸುವುದು ಇದರ ಉದ್ದೇಶ’ ಎಂದು ದೇವಸ್ವಂ ಸಚಿವ ವಿ.ಎನ್‌. ವಾಸವನ್‌ ಹೇಳಿದ್ದಾರೆ.

ಸಚಿವರ ಹೇಳಿಕೆ ಬೆನ್ನಲ್ಲೇ, ಈ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ 2019ರಲ್ಲಿ ದೇಗುಲ ಪ್ರವೇಶಿಸಿದ್ದ  ಹೋರಾಟಗಾರ್ತಿ ಬಿಂದು ಅಮ್ಮಿಣಿ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್‌ ಮಾಡಿದ್ದಾರೆ.

ADVERTISEMENT

‘ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಸಂಪ್ರದಾಯವನ್ನು ಉಲ್ಲಂಘಿಸಿದ ಹೋರಾಟಗಾರ್ತಿಯರಿಗೆ ಸಿಪಿಎಂ ನೇತೃತ್ವದ ಸರ್ಕಾರವು ಮತ್ತೆ ವೇದಿಕೆ ಒದಗಿಸುತ್ತಿದೆ’ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ, ಮಿಜೋರಾಂನ ಮಾಜಿ ರಾಜ್ಯಪಾಲ ಕುಮ್ಮನಂ ರಾಜಶೇಖರನ್‌ ಆರೋಪಿಸಿದ್ದಾರೆ. 

ಶಬರಿಮಲೆ ದೇವಸ್ಥಾನದ ಒಂದು ಭಾಗದ ಭಕ್ತರ ಹೆಸರಿನಲ್ಲಿ ಈ ರೀತಿ ಸಮ್ಮೇಳನ ಆಯೋಜಿಸುವುದು ಅಸಾಂವಿಧಾನಿಕ. ಚರ್ಚ್‌ನಲ್ಲಿ ಅಥವಾ ಮಸೀದಿಯಲ್ಲಿ ಸಿಪಿಎಂ ಈ ರೀತಿಯ ಸಮ್ಮೇಳನ ಆಯೋಜಿಸುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. 

ಶಬರಿ ರೈಲು ಯೋಜನೆ ಸೇರಿದಂತೆ ಶಬರಿಮಲೆ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಗಮನ ಹರಿಸದೆ, ಸಿಪಿಎಂ ಜಾಗತಿಕ ಅಯ್ಯಪ್ಪ ಸಮ್ಮೇಳನ ಆಯೋಜಿಸಲು ಮುಂದಾಗಿರುವುದನ್ನು ಬಿಜೆಪಿ ಟೀಕಿಸಿದೆ.  

10ರಿಂದ 50ವರ್ಷದೊಳಗಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಸುಪ್ರೀಂಕೊರ್ಟ್‌ ತೆರವುಗೊಳಿಸಿದಾಗ, 2019ರ ಜನವರಿಯಲ್ಲಿ ಬಿಂದು ಮತ್ತು  ಕನಕ ದುರ್ಗ ಎಂಬ ಮಹಿಳೆಯರಿಬ್ಬರು ಶಬರಿಮಲೆ ದೇಗುಲ ಪ್ರವೇಶಿಸಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು.

ಶಬರಿಮಲೆ ಯಾತ್ರೆಗೆ ಮಾನ್ಯತೆ:
ಕೊಲಂಬೊ: ಕೇರಳದ ಶಬರಿಮಲೆ ಯಾತ್ರೆಗೆ ಮಾನ್ಯತೆ ನೀಡಲು ಶ್ರೀಲಂಕಾ ಸರ್ಕಾರ ನಿರ್ಧರಿಸಿದೆ. ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಮಂಗಳವಾರ
ಪ್ರಕಟಣೆಯಲ್ಲಿ ತಿಳಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.