ADVERTISEMENT

ತ್ರಿವಳಿ ತಲಾಖ್ ಪ್ರಕರಣ: ಉತ್ತರ ಪ್ರದೇಶದಲ್ಲಿ ಗೃಹಿಣಿ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 11:47 IST
Last Updated 19 ಆಗಸ್ಟ್ 2019, 11:47 IST
   

ಶ್ರಾವಸ್ತಿ (ಉತ್ತರಪ್ರದೇಶ): ಮೂರು ಬಾರಿ ತಲಾಖ್ ಹೇಳಿವಿವಾಹ ವಿಚ್ಛೇದನ ನೀಡಲು ಯತ್ನಿಸಿದ್ದ ಪತಿ ವಿರುದ್ಧ ದೂರು ಸಲ್ಲಿಸಿದ್ದಗೃಹಿಣಿಯನ್ನು ಪತಿಯ ಮನೆಯವರು ಸಜೀವ ದಹನ ಮಾಡಿದ ಪ್ರಕರಣ ಶುಕ್ರವಾರ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ನಡೆದಿದೆ.

ವಿವಾಹ ವಿಚ್ಛೇದನ ನೀಡಲು ಕಾನೂನು ಮೊರೆ ಹೋಗುವ ಬದಲು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಎಂದು ಅಲ್ಲಿನ ಸ್ಥಳೀಯ ಪೊಲೀಸರು ಈ ದಂಪತಿಗಳಿಗೆ ಹೇಳಿದ್ದರು.

ಆಗಸ್ಟ್ 6ರಂದು ತನ್ನ ಮಗಳಿಗೆ ಆಕೆಯ ಗಂಡ ನಫೀಸ್ ಫೋನ್ ಮೂಲಕ ತಲಾಖ್ ಹೇಳಿದ್ದನು. ಸಂತ್ರಸ್ತೆ ಸಯೀದ (22) ಅದೇ ದಿನ ಪೊಲೀಸ್ ಠಾಣೆಗೆ ಹೋಗಿ ಪತಿ ವಿರುದ್ಧ ದೂರು ದಾಖಲಿಸಿದ್ದಳು. ಆದಾಗ್ಯೂ, ಮುಂಬೈಯಲ್ಲಿ ಕೆಲಸದಲ್ಲಿರುವ ಪತಿ ವಾಪಸ್ ಬರಲಿ. ಅಲ್ಲಿಯವರೆಗೆ ಕಾಯುತ್ತಿರಿ ಎಂದು ಹೇಳಿ ಪೊಲೀಸರು ಸಯೀದಳನ್ನು ಮನೆಗೆ ಕಳುಹಿಸಿದ್ದರು.

ನಫೀಸ್, ಪತ್ನಿ ಸಯೀದಳಿಗೆ ದಿನಾ ಹೊಡೆಯುತ್ತಿದ್ದ. ನಾನು ಈ ಬಗ್ಗೆ ಮಾತೆತ್ತಲಿಲ್ಲ. ಆಮೇಲೆ ಆತ ಮಗಳಿಕೆ ತಲಾಖ್ ನೀಡಿದ. ದೂರು ದಾಖಲಿಸಿದಾಗ ತನಗೆ ಎರಡನೇ ಅವಕಾಶ ನೀಡಿ ಎಂದು ಆತ ಒತ್ತಾಯಿಸಿದ್ದ ಎಂದು ಸಯೀದಳ ಅಪ್ಪ ರಮಜಾನ್ ಅಲಿ ಖಾನ್ ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ವಾರ ಪೊಲೀಸರು ಈ ದಂಪತಿಗಳಿಗೆ ಸಮನ್ಸ್ ನೀಡಿದ್ದರು. ನಫೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು ಇಬ್ಬರು ಜತೆಯಾಗಿ ಬಾಳಿ ಎಂದು ಪೊಲೀಸರು ಈ ದಂಪತಿಗೆ ಹೇಳಿದ್ದರು.

ಮರುದಿನ ನಫೀಸ್ ಮತ್ತು ಸಯೀದ ನಡುವೆ ಭಾರೀ ಜಗಳವಾಗಿತ್ತು. ಪತಿಯಿಂದ ಹಲ್ಲೆಗೊಳಗಾದ ಸಯೀದ ಮೇಲೆ ಆಕೆಯ ಅತ್ತೆ ಮಾಮಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಸಯೀದ ಅವರ ಮಗಳು ಇದನ್ನು ಕಣ್ಣಾರೆ ನೋಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈಗ ನೋಡಿ ಅವರೇನು ಮಾಡಿದ್ದಾರೆ ಎಂದು. ನಫೀಸ್, ಆತನ ಹೆತ್ತವರು ಮತ್ತು ಸಹೋದರಿಯರೇ ಇದಕ್ಕೆ ಹೊಣೆ ಎಂದು ಸಯೀದ ಅವರ ಅಪ್ಪ ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ನಫೀಸ್ ಮತ್ತು ಅವರ ಅಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ದೂರು ಸಿಕ್ಕಿದ್ದು ಪ್ರಕರಣ ದಾಖಲಿಸವಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಬಿ.ಎಸ್. ದುಬೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.