ADVERTISEMENT

ಮೊಮ್ಮಕ್ಕಳ ಕಂಡಿರುವ 55ರ ಹರೆಯದಲ್ಲಿ ಮಹಿಳೆಗೆ 17ನೇ ಯಶಸ್ವಿ ಹೆರಿಗೆ!

ಪಿಟಿಐ
Published 1 ಸೆಪ್ಟೆಂಬರ್ 2025, 11:25 IST
Last Updated 1 ಸೆಪ್ಟೆಂಬರ್ 2025, 11:25 IST
<div class="paragraphs"><p> 17ನೇ ಮಗುವಿನ ಜನ್ಮ ನೀಡಿದ ಮಹಿಳೆ</p></div>

17ನೇ ಮಗುವಿನ ಜನ್ಮ ನೀಡಿದ ಮಹಿಳೆ

   

ಜೈಪುರ: ಮೊಮ್ಮಕ್ಕಳನ್ನೂ ಎತ್ತಿ ಆಡಿಸುತ್ತಿರುವ ರಾಜಸ್ಥಾನದ ಉದಯಪುರದ 55 ವರ್ಷದ ಮಹಿಳೆಯ 17ನೇ ಹೆರಿಗೆ ಯಶಸ್ವಿಯಾಗಿದೆ.

ಜದೋಲ್‌ ಬ್ಲಾಕ್‌ನಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೇಖಾ ಎನ್ನುವ ಮಹಿಳೆ 17ನೇ ಮಗುವಿಗೆ ಜನ್ಮ ನೀಡಿದ್ದಾರೆ. 55ನೇ ವಯಸ್ಸಿನಲ್ಲಿ ಹೆರಿಗೆಯಾದ ಸುದ್ದಿ ಕೇಳಿ ಸುತ್ತಮುತ್ತಲಿನ ಊರಿನ ಜನರು, ಸಂಬಂಧಿಗಳು ಕುತೂಹಲದಿಂದ ಆಸ್ಪತ್ರೆಗೆ ಲಗ್ಗೆಯಿಟ್ಟಿದ್ದಾರೆ.

ADVERTISEMENT

ರೇಖಾ ಅವರು ಗುಜರಿ ವ್ಯಾಪಾರ ಮಾಡುವ ಕವಾರ ರಾಮ್ ಕಲಬೆಲಿಯಾ ಎನ್ನುವವರನ್ನು ಮದುವೆಯಾಗಿದ್ದರು. ಈ ದಂಪತಿ 17ನೇ ಮಗುವನ್ನು ಈಗ ಸ್ವಾಗತಿಸಿದೆ. ಈ ಹಿಂದೆ ಜನಿಸಿದ್ದ ಮಕ್ಕಳಲ್ಲಿ ನಾಲ್ಕು ಗಂಡು, ಒಂದು ಹೆಣ್ಣು ಸೇರಿ ಐದು ಮಕ್ಕಳು ಹುಟ್ಟಿದ ಕೆಲವೇ ದಿನಗಳಲ್ಲಿ ಮೃತಪಟ್ಟಿದ್ದಾರೆ. ಸದ್ಯ 7 ಗಂಡು, 5 ಹೆಣ್ಣಮಕ್ಕಳು ಸೇರಿ 12 ಮಕ್ಕಳನ್ನು ದಂಪತಿ ಹೊಂದಿದ್ದಾರೆ. ಇವರಲ್ಲಿ ಈಗಾಗಲೇ ಇಬ್ಬರು ಗಂಡು ಮಕ್ಕಳು ಮತ್ತು ಮೂವರು ಹೆಣ್ಣು ಮಕ್ಕಳಿಗೆ ಮದುವೆಯಾಗಿದೆ. ಎಲ್ಲರಿಗೂ ಮಕ್ಕಳಿದ್ದಾರೆ ಎಂದು ಕವಾರ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಮೂರು ತಲೆ ಮಾರಿನವರು ಒಂದೇ ಸೂರಿನಡಿ ಬದುಕುತ್ತಿದ್ದೇವೆ. ನಮ್ಮ ಕುಟುಂಬದ ಯಾವ ಮಕ್ಕಳೂ ಶಾಲೆಯ ಮೆಟ್ಟಿಲು ಹತ್ತಿಲ್ಲ. ಮಕ್ಕಳ ಮದುವೆ ಮಾಡಲು ಸಾಲ ಮಾಡಿದ್ದೇನೆ ಎಂದು ಹೇಳಿದ್ದಾರೆ.

‘ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಇದು ನಾಲ್ಕನೇ ಮಗು ಎಂದು ಹೇಳಿದ್ದರು. ಆದರೆ ಇದು 17ನೇ ಮಗು ಎನ್ನುವುದು ಬಳಿಕ ತಿಳಿದುಬಂದಿತು. ಮಹಿಳೆಯ ಬಳಿ ಸೊನೊಗ್ರಫಿ ಅಥವಾ ಹೆರಿಗೆ ಪೂರ್ವದ ತಪಾಸಣೆಗಳ ಯಾವ ವರದಿಗಳೂ ಇರಲಿಲ್ಲ. ಹೆರಿಗೆ ವೇಳೆ ಅತಿಯಾದ ರಕ್ತಸ್ರಾವದಿಂದ ಮರಣ ಹೊಂದುವ ಸಾಧ್ಯತೆಯೂ ದಟ್ಟವಾಗಿತ್ತು. ಆದರೆ ಅದೃಷ್ಟವಶಾತ್‌ ಯಾವುದೇ ಅಪಾಯವಾಗಲಿಲ್ಲ. ಶಿಕ್ಷಣದ ಕೊರತೆ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಮಾಹಿತಿಯ ಅರಿವಿಲ್ಲದಿರುವುದೇ ಈ ರೀತಿಯ ಪ್ರಕರಣಗಳಿಗೆ ಕಾರಣವಾಗಿದೆ’ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.