ಸಾಂದರ್ಭಿಕ ಚಿತ್ರ
ಜಾಲ್ನಾ(ಮಹಾರಾಷ್ಟ್ರ): ತವರಿಗೆ ಬಂದ ಮಹಿಳೆಯನ್ನು ಆಕೆಯ ಹೆತ್ತವರೇ ಸರಪಳಿಯಲ್ಲಿ ಕಟ್ಟಿ ಹಾಕಿದ್ದರು. ಸದ್ಯ ಆಕೆಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ.
ಮಹಿಳೆಯ ಪತಿ ನೀಡಿದ ದೂರಿನ ಮೇರೆಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠದ ನಿರ್ದೇಶನದಂತೆ ಪೊಲೀಸರು ಸೋಮವಾರ ಶಹನಾಜ್ ಅಲಿಯಾಸ್ ಸೋನಾಲ್ ಎಂಬ ಮಹಿಳೆಯನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೋಕರ್ದನ್ ತಹಸಿಲ್‌ನ ಅಲಾಪುರ್ ಗ್ರಾಮದಲ್ಲಿರುವ ಮನೆಯಲ್ಲಿ ಶಹನಾಜ್ ಅವರನ್ನು ಆಕೆಯ ಪೋಷಕರು ಸುಮಾರು ಎರಡು ತಿಂಗಳ ಕಾಲ ಸರಪಳಿಯಲ್ಲಿ ಕಟ್ಟಿಹಾಕಿದ್ದರು.
20 ವರ್ಷದ ಶಹನಾಜ್ ಅಂತರ್ಧರ್ಮೀಯ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗನಿದ್ದಾನೆ. 2 ತಿಂಗಳ ಹಿಂದೆ ಆಕೆ ಮಗುವಿನೊಂದಿಗೆ ತನ್ನ ಹೆತ್ತವರನ್ನು ಭೇಟಿ ಮಾಡಲು ತೆರಳಿದ್ದಳು. ಅಂತರ್ಧರ್ಮೀಯ ವಿವಾಹವಾಗಿದ್ದಕ್ಕೆ ಅಸಮಾಧಾನಗೊಂಡಿದ್ದ ಪೋಷಕರು, ಆಕೆ ಮರಳಿ ಗಂಡನ ಮನೆಗೆ ಹಿಂತಿರುಗಲು ಅನುಮತಿ ನಿರಾಕರಿಸಿದ್ದರು. ಅಲ್ಲದೇ ಆಕೆಯನ್ನು ಮನೆಯಲ್ಲಿಯೇ ಕಟ್ಟಿಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯನ್ನು (ಶಹನಾಜ್) ವಾಪಸ್ ಕರೆದುಕೊಂಡ ಹೋಗಲು ಆಕೆಯ ಪತಿ ಹಲವು ಬಾರಿ ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರ ತಂಡ ಮನೆಯ ಮೇಲೆ ದಾಳಿ ನಡೆಸಿ, ಶಹನಾಜ್ ಮತ್ತು ಆಕೆಯ ಮಗನನ್ನು ರಕ್ಷಿಸಿದ್ದಾರೆ. ಬಳಿಕ ಸರ್ಕಾರಿ ವಕೀಲರ ಮೂಲಕ ಪತಿಗೆ ಹಸ್ತಾಂತರಿಸಿದ್ದಾರೆ.
ಪೋಷಕರ ವಿರುದ್ಧ ಇದುವರೆಗೆ ಪ್ರಕರಣ ದಾಖಲಾಗಿಲ್ಲ. ಮಹಿಳೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.