ಹುಲಿ
ವಯನಾಡ್: ಕೇರಳದ ವಯನಾಡ್ ಜಿಲ್ಲೆಯ ಮಾನಂದವಾಡಿಯ ಪ್ರಿಯದರ್ಶಿನಿ ಕಾಫಿ ಎಸ್ಟೇಟ್‌ನಲ್ಲಿ ಆದಿವಾಸಿ ಮಹಿಳೆಯನ್ನು ಹುಲಿಯೊಂದು ಕೊಂದು ಹಾಕಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಪ್ರತಿಭಟನೆ ನಡೆಸಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ರಾಧಾ (47) ಹುಲಿ ದಾಳಿಗೆ ಬಲಿಯಾದವರು. ಶುಕ್ರವಾರ ಬೆಳಿಗ್ಗೆ ಕಾಫಿ ಕೊಯ್ಯಲು ತೆರಳಿದ್ದಾಗ ಘಟನೆ ನಡೆದಿದೆ.
ಸರ್ಕಾರದ ಪರಿಣಾಮಕಾರಿ ಕ್ರಮದಿಂದಾಗಿ ರಾಜ್ಯದಲ್ಲಿ ಮಾನವ–ವನ್ಯಜೀವಿ ಸಂಘರ್ಷ ಇಳಿಕೆಯಾಗಿದೆ ಎಂದು ಕೇರಳ ಅರಣ್ಯ ಸಚಿವ ಎ.ಕೆ ಶಶೀಂಧ್ರನ್ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಮರುದಿನವೇ ಘಟನೆ ಸಂಭವಿಸಿದೆ.
ಘಟನೆ ನಡೆದ ಕೂಡಲೇ ಸ್ಥಳೀಯರು ಪ್ರತಿಭಟಿಸಿದ್ದು, ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗುವುನ್ನು ತಡೆದಿದ್ದಾರೆ. ಬಳಿಕ ಹುಲಿಯನ್ನು ಸೆರೆಹಿಡಿಯಲಾಗುವುದು ಅಥವಾ ಕೊಲ್ಲಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಪ್ರದೇಶಕ್ಕೆ ಭೇಟಿ ನೀಡಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಖಾತೆ ಸಚಿವ ಒ.ಆರ್ ಕೇಲು ಅವರಿಗೂ ಪ್ರತಿಭಟನೆಯ ಬಿಸಿ ಮುಟ್ಟಿತು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಅಪೇಕ್ಷೆಯಂತೆ ಹುಲಿಯನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಆದೇಶಿಸಲಾಗಿದೆ ಎಂದರು.
ಮೃತ ಮಹಿಳೆಯ ಕುಟುಂಬದ ಸದಸ್ಯರಿಗೆ ನೌಕರಿ ಕೊಡಿಸುವ ಪ್ರಸ್ತಾಪವನ್ನು ಸಚಿವ ಸಂಪುಟದ ಮುಂದೆ ಇಡಲಾಗುವುದು. ಪರಿಹಾರವಾಗಿ ₹ 11 ಲಕ್ಷ ನೀಡುವುದಾಗಿ ಘೋಷಿಸಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಹಾಗೂ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮಹಿಳೆ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಹಿಳೆಯನ್ನು ಕೊಂದು ಹಾಕಿದ ಹುಲಿಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೂಚಿಸಿದ ಪ್ರಮಾಣಿತ ಕಾರ್ಯಾಚರಣೆ ವಿಧಾನದ ಪ್ರಕಾರ ಸೆರೆಹಿಡಿಯಲು ಸರ್ವ ಪ್ರಯತ್ನಗಳನ್ನೂ ಮಾಡಬೇಕು. ಆಗದೇ ಇದ್ದಲ್ಲಿ ಗುಂಡಿಕ್ಕಿ ಕೊಲ್ಲಬೇಕು ಎಂದು ಮುಖ್ಯ ವನ್ಯಜೀವಿ ವಾರ್ಡನ್ ಪ್ರಮೋದ್ ಜಿ. ಕೃಷ್ಣನ್ ಆದೇಶಿಸಿದ್ದಾರೆ.
ಹುಲಿಯಿಂದ ಮಾನವ ಜೀವನಕ್ಕೆ ತೊಂದರೆಯುಂಟಾಗುತ್ತದೆ ಎನ್ನುವುದಕ್ಕೆ ನಿದರ್ಶನಗಳು ಇದ್ದರೆ ಮಾತ್ರ ಕೊಲ್ಲಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.