ADVERTISEMENT

ಪುರುಷನ ಸ್ಪರ್ಶದ ಉದ್ದೇಶ ಮಹಿಳೆಗೆ ಅರ್ಥವಾಗುತ್ತದೆ: ಬಾಂಬೆ ಹೈಕೋರ್ಟ್

ಪಿಟಿಐ
Published 3 ಮಾರ್ಚ್ 2020, 19:19 IST
Last Updated 3 ಮಾರ್ಚ್ 2020, 19:19 IST
   

ಮುಂಬೈ: ‘ಪುರುಷ ಯಾವ ಉದ್ದೇಶದಿಂದ ಸ್ಪರ್ಶಿಸುತ್ತಾನೆ ಅಥವಾ ಆತನ ನೋಟದಲ್ಲಿ ಯಾವ ಉದ್ದೇಶ ಇದೆ ಎನ್ನುವುದು ಮಹಿಳೆಗೆ ಹೆಚ್ಚು ಅರ್ಥವಾಗುತ್ತದೆ. ಅದು ಆಕೆಗೆ ದೊರಕಿರುವ ಸಹಜವಾದ ವರ. ಪುರುಷರಿಗೆ ಇಂತಹದ್ದು ಅರ್ಥವಾಗುವುದಿಲ್ಲ’ ಎಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಪೃಥ್ವಿರಾಜ್ ಚೌಹಾಣ್ ಅವರು ಅರ್ಜಿ ವಿಚಾರಣೆಯೊಂದರ ವೇಳೆ ಹೇಳಿದ್ದಾರೆ.

ಮಾಜಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಮಗೆ ವಿಧಿಸಲಾಗಿರುವ ಶಿಕ್ಷೆ ಅಮಾನತುಗೊಳಿಸುವಂತೆ ಉದ್ಯಮಿ ವಿಕಾಸ್ ಸಚ್‌ದೇವ್ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚೌಹಾಣ್, ಅರ್ಜಿ ಇತ್ಯರ್ಥವಾಗುವವರೆಗೆ ಶಿಕ್ಷೆ ಅಮಾನತುಗೊಳಿಸಲಾಗುತ್ತದೆ ಎಂದರು.

2017ರ ಡಿಸೆಂಬರ್‌ನಲ್ಲಿ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ನಟಿಗೆ ಸಚ್‌ದೇವ್‌ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. 2020ರ ಜ.15ರಂದು ಈ ಪ್ರಕರಣದ ತೀರ್ಪು ಘೋಷಿಸಿದ್ದ ಸೆಷನ್ಸ್‌ ನ್ಯಾಯಾಲಯ, ಸಚ್‌ದೇವ್‌ ಅವರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅದೇ ದಿನ ಜಾಮೀನು ನೀಡಿದ ನ್ಯಾಯಾಲಯ, 3 ತಿಂಗಳ ಅವಧಿಗೆ ಶಿಕ್ಷೆ ಅಮಾನತುಗೊಳಿಸಿತ್ತು. ‘ಬ್ಯುಸಿನೆಸ್ ಕ್ಲಾಸ್‌ನಲ್ಲಿ ಆಸನ ವಿಶಾಲವಾಗಿತ್ತು. ಆದರೂ ಆಕೆಯ ಆಸನದ ಕೈವಿರಮಿಸುವ ಜಾಗದಲ್ಲಿ ಕಾಲುಚಾಚಿ ಕೂತಿದ್ದೇಕೆ?’ ಎಂದು ಸಚ್‌ದೇವ್‌ ಅವರಿಗೆ ನ್ಯಾಯಮೂರ್ತಿ ಪ್ರಶ್ನಿಸಿದರು.

ADVERTISEMENT

‘ಸಂತ್ರಸ್ತೆ ವಿಮಾನದ ಸಿಬ್ಬಂದಿಗೆ ಏಕೆ ವಿಷಯ ತಿಳಿಸಲಿಲ್ಲ? ವಿಮಾನದಿಂದ ಹೊರಗಿಳಿಯುವಾಗ ನಗುಮುಖದಲ್ಲಿ ಇದ್ದುದು ಏಕೆ?’ ಎಂದು ಸಚ್‌ದೇವ್‌ ಪರ ವಕೀಲ ಅನಿಕೇತ್ ನಿಕಂ ವಾದಿಸಿದರು. ಇದಕ್ಕೆ ಉತ್ತರಿಸಿದ ನ್ಯಾಯಮೂರ್ತಿ, ‘ಇಂತಹ ಘಟನೆಗಳಿಗೆ ಮಹಿಳೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಯಾವುದೇ ಸಿದ್ಧಸೂತ್ರಗಳಿಲ್ಲ. ಇದು ಗಣಿತ ಅಲ್ಲ’ ಎಂದರು. ‘ಸಚ್‌ದೇವ್ ಹೊಸದಾಗಿ ₹ 25 ಸಾವಿರದ ಜಾಮೀನು ಪ್ರಮಾಣಪತ್ರ ಸಲ್ಲಿಸಬೇಕು ಮತ್ತು ಸೆಷನ್ಸ್‌ ಕೋರ್ಟ್ ಅನುಮತಿ ಇಲ್ಲದೆ ಮುಂಬೈನಿಂದ ಹೊರಹೋಗುವಂತಿಲ್ಲ’ ಎಂದು ನ್ಯಾಯಾಲಯ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.