ಸಾವು
(ಪ್ರಾತಿನಿಧಿಕ ಚಿತ್ರ)
ಭದೋಹಿ: 24 ದಿನಗಳಿಂದ ಕಾಣೆಯಾಗಿದ್ದ 65 ವರ್ಷದ ವೃದ್ಧೆಯ ಮೃತದೇಹವು ಕೆಟ್ಟು ಹೋಗಿದ್ದ ಬೋರ್‌ವೆಲ್ ಒಂದರ ಪೈಪ್‌ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವೃದ್ಧೆ ಶ್ಯಾಮ ದೇವಿ ಆಗಸ್ಟ್ 14ರಂದು ಭೈರಾ ಕಾಸ್ ಗ್ರಾಮದಲ್ಲಿನ ಮನೆಯಿಂದ ಕಾಣೆಯಾಗಿದ್ದರು. ಆಗಸ್ಟ್ 18ರಂದು ದೂರು ದಾಖಲಾಗಿತ್ತು ಎಂದು ಪತಿ ಹರಿಶಂಕರ್ ಮೌರ್ಯ ತಿಳಿಸಿದ್ದಾರೆ.
ಭಾನುವಾರದಂದು ಬೋರ್‌ವೆಲ್‌ನಿಂದ ವಾಸನೆ ಬರುತ್ತಿತ್ತು. ಈ ಬೋರ್‌ವೆಲ್ 5 ವರ್ಷದಿಂದ ಮುಚ್ಚಿದ ಸ್ಥಿತಿಯಲ್ಲಿದೆ. 1.5 ಅಡಿ ಸುತ್ತಳತೆಯ ಬೋರ್‌ವೆಲ್ ಒಳಗೆ ಸುಮಾರು 20 ಅಡಿ ಹಗ್ಗವನ್ನು ಗ್ರಾಮಸ್ಥರು ಇಳಿಬಿಟ್ಟಿದ್ದಾರೆ. ಬಳಿಕ ಫ್ಲಾಶ್‌ಲೈಟ್ ಬಳಸಿ ನೋಡಿದಾಗ ಕೈ ಗೋಚರಿಸಿದೆ.
ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ನೆರವಿನಿಂದ ಬೋರ್‌ವೆಲ್ ಒಳಗಿನ ಮೃತದೇಹವನ್ನು ಹೊರತೆಗೆದಿದ್ದಾರೆ.
ಮೃತ ಶ್ಯಾಮ ದೇವಿ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಘಟನೆಯ ಬಗ್ಗೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಮಹಿಳೆಗೆ ಐವರು ಮಕ್ಕಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.