ADVERTISEMENT

ತೆಲಂಗಾಣ ‌| ಮಹಿಳಾ ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಹತ್ಯೆ

ಹಾಡಹಗಲೇ ಕೃತ‌್ಯ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:54 IST
Last Updated 4 ನವೆಂಬರ್ 2019, 19:54 IST
ವಿಜಯಾ ರೆಡ್ಡಿ
ವಿಜಯಾ ರೆಡ್ಡಿ   

ಹೈದರಾಬಾದ್‌: ಮಹಿಳಾ ತಹಶೀಲ್ದಾರ್‌ ಅವರನ್ನು ಅವರ ಕಚೇರಿಯಲ್ಲಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಂದಿರುವ ದಾರುಣ ಘಟನೆ ಸೋಮವಾರ ಮಧ್ಯಾಹ್ನ ರಂಗಾ ರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್‌ನಲ್ಲಿ ನಡೆದಿದೆ.

ತೀವ್ರ ಸುಟ್ಟಗಾಯಗಳಿಂದ ತಹಶೀಲ್ದಾರ್ ಕಚೇರಿಯಲ್ಲೇ ಸತ್ತಿದ್ದಾರೆ. ತಹಶೀಲ್ದಾರ್ ಅವರನ್ನು ರಕ್ಷಿಸುವ ಅವರ ವಾಹನ ಚಾಲಕ ಹಾಗೂ ಕಚೇರಿಗೆ ಬಂದಿದ್ದ ಸಾರ್ವಜನಿಕರೊಬ್ಬರ ಯತ್ನ ವಿಫಲವಾಗಿದೆ. ಈ ಇಬ್ಬರಿಗೂ ಸುಟ್ಟಗಾಯಗಳಾಗಿವೆ.

ವಿಜಯಾ ರೆಡ್ಡಿ ಹೀಗೇ ದಾರುಣ ಅಂತ್ಯಕಂಡ ತಹಶೀಲ್ದಾರ್. ಇವರು ಮೂಲತಃದಿಲ್‌ಸುಖ್‌ನಗರ ನಿವಾಸಿಯಾಗಿದ್ದು, ಇಬ್ಬರು ಮಕ್ಕಳಿ ದ್ದಾರೆ. ಅವರ ಪತಿ ಸುಭಾಷ್‌ ರೆಡ್ಡಿ ಉಪನ್ಯಾಸಕರಾಗಿದ್ದಾರೆ. ದಕ್ಷ ಅಧಿಕಾರಿ ಎಂದೇ ಅವರು ಕಂದಾಯ ವಲಯದಲ್ಲಿ ಹೆಸರಾಗಿದ್ದರು.

ADVERTISEMENT

ಬೆಂಕಿ ಹಚ್ಚಿದ ವ್ಯಕ್ತಿಯನ್ನು ಹಯಾತ್‌ನಗರ ಬ್ಲಾಕ್‌ನ ಗೌರೇಲಿ ಗ್ರಾಮದ ನಿವಾಸಿ ಸುರೇಶ್‌ ಎಂದು ಗುರುತಿಸಲಾಗಿದೆ.ಆತನಿಗೂ ಬೆಂಕಿ ಹೊತ್ತಿದ್ದು, ಶೇ 60ರಷ್ಟು ಸುಟ್ಟಗಾಯವಾಗಿದೆ. ಕಚೇರಿಯಿಂದ ಹೊರಗೆ ಓಡಿ ಪಾರಾಗಿದ್ದಾನೆ. ಈತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿ ಬಾಗಿಲು ತೆರೆದು ಓಡಿದ ಹಿಂದೆಯೇ ತಹಶೀಲ್ದಾರ್ ಕೂಡಾ ಹೊರಬರಲು ಯತ್ನಿಸಿದ್ದು, ಕಚೇರಿಯ ಬಾಗಿಲ ಬಳಿಯೇ ಕುಸಿದುಬಿದ್ದು ಮೃತಪಟ್ಟಿದ್ದಾರೆ.

ಅಬ್ದುಲ್ಲಾಪುರ್‌ಮೆಟ್‌ ಅನ್ನು ಎರಡು ವರ್ಷದಿಂದ ಹಿಂದೆ ಪ್ರತ್ಯೇಕ ಬ್ಲಾಕ್‌ ಆಗಿ ಘೋಷಿಸಿದ್ದು, ಅಂದಿನಿಂದ ವಿಜಯಾ ಅವರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಭೂ ವ್ಯವಹಾರ ವಿಳಂಬ ಕಾರಣ?
ಭೂಮಿಗೆ ಸಂಬಂಧಿಸಿದ ವ್ಯವಹಾರ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಆರೋಪಿ ಸುರೇಶ್‌ ಪೆಟ್ರೋಲ್‌ ತುಂಬಿದ್ದ ಬಾಟೆಲ್‌ ಹಾಗೂ ಕೆಲ ಭೂ ದಾಖಲೆಗಳೊಂದಿಗೆ ಕಚೇರಿಗೆ ಬಂದಿದ್ದ.

ತಹಶೀಲ್ದಾರ್ ಅವರ ಬಳಿ ಕೆಲಸವಿದೆ ಎಂದು ಕಚೇರಿಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದು, ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ. ಬಾಗಿಲು ತೆಗೆದಾಗ ಓಡಿಬಂದಿದ್ದು ಆ ವೇಳೆಗೆ ಬಹುತೇಕ ಸುಟ್ಟಿತ್ತು ಬಾಗಿಲ ಬಳಿ ಕುಸಿದರು.

‘ಇದು, ಪೂರ್ವಯೋಜಿತ ಕೃತ್ಯ. ಆರೋಪಿಗೂ ಶೇ 50ರಿಂದ 60ರಷ್ಟು ಸುಟ್ಟಗಾಯ ಆಗಿದೆ. ಇನ್ನೊಬ್ಬರ ಪರವಾಗಿ ಕೃತ್ಯ ಎಸಗಿದ್ದಾನೆಯೇ ಎಂದು ತನಿಖೆ ನಡೆಸುತ್ತಿದ್ದೇವೆ. ಇಬ್ಬರು ಗಾಯಗೊಂಡಿರುವ ಕಾರಣ ಆತನ ವಿರುದ್ಧ ಕೊಲೆಯತ್ನ ಪ್ರಕರಣವನ್ನೂ ದಾಖಲಿಸಲಾಗುತ್ತದೆ’ ಎಂದು ಪೊಲೀಸ್‌ ಕಮಿಷನರ್ ಮಹೇಶ್‌ ಭಾಗವತ್ ಹೇಳಿದರು.

‘ಅಧಿಕಾರಿಗಳು ನನ್ನ ಭೂಮಿ ದಾಖಲೆಗಳ ಲೋಪ ಸರಿಪಡಿಸಲು ಒತ್ತು ನೀಡಿಲ್ಲ. ಹಲವು ಬಾರಿ ಕಚೇರಿಗೆ ಭೇಟಿ ನೀಡಿದ್ದರೂ ಸ್ಪಂದಿಸಿರಲಿಲ್ಲ ಎಂದು ಕೋಪಗೊಂಡಿದ್ದ’ ಎಂದು ವರದಿ ತಿಳಿಸಿದೆ. ಆರೋಪಿಯ ತಾಯಿ ಪದ್ಮಾ, ‘ನಮಗೆ ಯಾವುದೇ ಭೂ ವಿವಾದ ಇರಲಿಲ್ಲ. ಈತ ಏಕೆ ಈ ಕೃತ್ಯಕ್ಕೆ ಮುಂದಾದ ಎಂದು ತಿಳಿದಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.