ADVERTISEMENT

ಕಾರಿನಡಿ ಸಿಲುಕಿ 4 ಕಿ.ಮೀ ಸಾಗಿದ ಯುವತಿ ಶವ: ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2023, 11:46 IST
Last Updated 2 ಜನವರಿ 2023, 11:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ 20 ವರ್ಷದ ಯುವತಿಯೊಬ್ಬರು ಮೃತಪಟ್ಟಿದ್ದು, ಕಾರಿನಡಿ ಸಿಲುಕಿದ್ದ ಆಕೆಯ ಮೃತದೇಹವನ್ನು ಸುಮಾರು 4 ಕಿ.ಮೀ.ವರೆಗೂ ಎಳೆದೊಯ್ದಿರುವ ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದೆಹಲಿಯ ಹೊರಭಾಗದ ಸುಲ್ತಾನ್‌ಪುರಿಯಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ರಸ್ತೆಯ ಮೇಲೆ ಯುವತಿ ಮೃತದೇಹ ನಗ್ನಾವಸ್ಥೆಯಲ್ಲಿ ಬಿದ್ದಿರುವ, ಆಕೆಯ ಕಾಲುಗಳು ಮುರಿದಿರುವ, ಕಾರಿನಡಿಯಲ್ಲಿ ಆಕೆ ಸಿಲುಕಿದ್ದು, ಕಾರು ಚಲಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಂಧಿತರನ್ನು ಗಲ್ಲಿಗೆ ಹಾಕಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸ್ಕೂಟಿಗೆ ಡಿಕ್ಕಿ ಹೊಡಿಸಿ ಅಪಘಾತ ಮಾಡಿದ ಸಂಬಂಧ ಮಾರುತಿ ಬಲೆನೊ ಕಾರಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕುತುಬ್‌ಗಡ ಪ್ರದೇಶದತ್ತ ಹೊರಟಿದ್ದ ಕಾರಿನಡಿ ಯುವತಿಯ ಮೃತದೇಹ ಸಿಲುಕಿತ್ತು. ರೋಹಿಣಿ ಜಿಲ್ಲೆಯ ಖಂಜಾವಲಾ ಪೊಲೀಸ್‌ ಸಿಬ್ಬಂದಿ ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ದೀಪಕ್‌ ಖನ್ನಾ (26), ಅಮಿತ್‌ ಖನ್ನಾ (25), ಕೃಷ್ಣಾ (27), ಮಿಥುನ್‌ (26) ಮತ್ತು ಮನೋಜ್‌ ಮಿತ್ತಲ್‌ ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್‌ 279 ಮತ್ತು 304–ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಡಿಸಿಪಿ ಹರೇಂದ್ರಕುಮಾರ್‌ ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.