ADVERTISEMENT

ಗಂಡನನ್ನು ಹಂಚಿಕೊಳ್ಳಲು ಹೆಂಡತಿ ಇಷ್ಟಪಡುವುದಿಲ್ಲ: ಅಲಹಾಬಾದ್ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 3 ಮೇ 2022, 19:31 IST
Last Updated 3 ಮೇ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಲಹಾಬಾದ್: ಭಾರತದ ಯಾವ ಮಹಿಳೆಯೂ ತನ್ನ ಗಂಡನನ್ನು ಬೇರೊಬ್ಬರ ಜೊತೆ ಹಂಚಿಕೊಂಡು ಸಮಚಿತ್ತದಿಂದ ಇರಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ತಮ್ಮ ಎರಡನೇ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪವನ್ನು ಕೈಬಿಡಬೇಕು ಎಂದು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿತು.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಅವರು, ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರ ಆದೇಶವನ್ನು ಕೈಬಿಡಲು ನಿರಾಕರಿಸಿದರು. ‘ಗಂಡ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಲು ಮುಂದಾಗುವುದನ್ನು ಅಥವಾ ಗಂಡನನ್ನು ಬೇರೊಬ್ಬ ಮಹಿಳೆಯ ಜೊತೆ ಹಂಚಿಕೊಳ್ಳುವುದನ್ನು ಯಾವ ಮಹಿಳೆಯೂ ಇಷ್ಟಪಡುವುದಿಲ್ಲ’ ಎಂದು ನ್ಯಾಯಮೂರ್ತಿ ಹೇಳಿದರು.

ADVERTISEMENT

ಪತ್ನಿಯ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಆರೋಪ ಸುಶೀಲ್ ಕುಮಾರ್ ಎಂಬ ವ್ಯಕ್ತಿ ಮೇಲಿದೆ. 2018ರ ಸೆ.22ರಂದು ಗಂಡನ ವಿರುದ್ಧ
ಠಾಣೆಗೆ ದೂರು ನೀಡಿದ್ದ ಮಹಿಳೆ, ಮರುದಿನ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶೀಲ್ ಕುಮಾರ್ ಅವರು ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ
ಮದುವೆಯಾಗಿದ್ದರು. ತಮಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಚಾರವನ್ನು ಎರಡನೇ ಮದುವೆ ವೇಳೆ ಮುಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿದೆ. ಗಂಡ ಮೂರನೇ ಮದುವೆಯಾಗಲು ಮುಂದಾಗಿರುವ ವಿಷಯ ತಿಳಿದು ಎರಡನೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ರಹಸ್ಯವಾಗಿ ಬೇರೊಬ್ಬರ ಜೊತೆ ಗಂಡ ಮದುವೆಯಾಗಿದ್ದಾನೆ ಎಂದು ಪತ್ನಿ ತಿಳಿದುಕೊಂಡಿದ್ದಾಳೆ. ಆತ್ಮಹತ್ಯೆಗೆ ಇಷ್ಟು ಕಾರಣ ಸಾಕು’ ಎಂದು ಕೋರ್ಟ್ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.