ನವದೆಹಲಿ: ಅಡುಗೆ ಇಂಧನ ಬಳಕೆಯಿಂದ ಉಂಟಾಗುವ ಮಾಲಿನ್ಯದಿಂದಾಗಿ ಮಹಿಳೆಯರ ಮಿದುಳಿನ ಸಾಮರ್ಥ್ಯ ದುರ್ಬಲಗೊಳ್ಳುವ ತೊಂದರೆಗೆ ಒಳಗಾಗುತ್ತಾರೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಧ್ಯಯನ ವರದಿ ತಿಳಿಸಿದೆ.
ರೀಜನಲ್ ಹೆಲ್ತ್ ಸೌತ್‌ಈಸ್ಟ್ ಏಷಿಯಾ ಜರ್ನಲ್ ‘ಲ್ಯಾಂಕೆಟ್’ನಲ್ಲಿ ಐಐಎಸ್‌ಸಿ ವರದಿ ಪ್ರಕಟಿಸಿದೆ. ಮನೆಯ ಮಾಲಿನ್ಯವು ಮಿದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಪರೀಕ್ಷಿಸಲು ಕೈಗೊಂಡ ಏಕೈಕ ಅಧ್ಯಯನ ಇದಾಗಿದೆ ಎಂದು ಹೇಳಿದೆ. ಷಿಕಾಗೊ ವಿಶ್ವವಿದ್ಯಾಲಯದ ಸಂಶೋಧನಕರು ಈ ಅಧ್ಯಯನ ತಂಡದಲ್ಲಿದ್ದಾರೆ.
ಕರ್ನಾಟಕದ ಶ್ರೀನಿವಾಸಪುರ ಪಟ್ಟಣದ ವಯಸ್ಕರ ಮಿದುಳಿನ ಎಮ್‌ಆರ್‌ಐ ಸ್ಕ್ಯಾನ್ ವರದಿಯಲ್ಲಿ, ಮಿದುಳಿನ ಕಾರ್ಯ ಚಟುವಟಿಕೆಯ ಸಾಮರ್ಥ್ಯ ದುರ್ಬಲಗೊಳ್ಳುವ ಅಪಾಯವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಕಂಡು ಬಂದಿದೆ ಎಂದು ಐಐಎಸ್‌ಸಿ ತನ್ನ ವಿಶ್ಲೇಷಣೆಯಲ್ಲಿ ತಿಳಿಸಿದೆ.
45 ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ 4,100 ಜನರು ಸಂಶೋಧನೆಯಲ್ಲಿ ಭಾಗಿಯಾಗಿದ್ದರು. ಈ ಪೈಕಿ 1,000 ಜನರ ಮಿದುಳಿನ ಎಮ್‌ಆರ್‌ಐ ಸ್ಕ್ಯಾನ್ ಮಾಡಲಾಗಿದೆ.
ಮಹಿಳೆಯರ ಮಿದುಳಿನ ಎಮ್‌ಆರ್‌ಐ ಸ್ಕ್ಯಾನಿಂಗ್‌ನಲ್ಲಿ ‘ಹಿಪೊಕ್ಯಾಂಪಸ್’ ಪ್ರಮಾಣವು ಕಡಿಮೆ ಕಂಡು ಬಂದಿದೆ. ಇದು ಮರೆಗುಳಿತನ ಮತ್ತು ಅಲ್ಝೀಮರ್ಸ್ ಕಾಯಿಲೆಗೆ ಪ್ರಮುಖ ಕಾರಣವಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು. ಅಡುಗೆಗೆ ಶುದ್ಧ ಅಥವಾ ಹಾನಿಕಾರಕವಲ್ಲದ ಇಂಧನವನ್ನು ಬಳಸಲು ಉತ್ತೇಜಿಸುವುದರಿಂದ ಗಂಭೀರ ಅಪಾಯಗಳನ್ನು ತಡೆಗಟ್ಟಬಹುದು ಎಂದು ಅಧ್ಯಯನ ವರದಿ ಹೇಳಿದೆ.
ಅಡುಗೆಗಾಗಿ ಘನ ಇಂಧನವನ್ನು ಸುಡುವುದರಿಂದ ಇಂಗಾಲ ಸಾರಜನಕ ಸಲ್ಫರ್ ಹಾಗೂ ಭಾರ ಲೋಹಗಳ ಆಕ್ಸೈಡ್‌ಗಳಂತಹ ಮಾಲಿನ್ಯಕಾರಕಗಳು ಪರಿಸರಕ್ಕೆ ಬಿಡುಗಡೆಯಾಗುತ್ತವೆ. ಇವು ಮಿದುಳಿನ ಕಾರ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಪ್ರಾಥಮಿಕವಾಗಿ ಉರಿಯೂತ ಹಾಗೂ ಮಿದುಳಿನ ಜೀವಕೋಶಗಳಿಗೆ ಹಾನಿಯಾಗುತ್ತದೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ. ಮನುಷ್ಯನ ನೆನಪಿನ ಶಕ್ತಿ ತಾರ್ಕಿಕ ಚಿಂತನೆ ಹಾಗೂ ಮಾತಿನ ಸಾಮರ್ಥ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇದು ಬುದ್ಧಿಮಾಂದ್ಯತೆ ಹಾಗೂ ಅಲ್ಝೀಮರ್ಸ್ ಕಾಯಿಲೆಗೆ ಕಾರಣವಾಗಬಹುದು. ಇದರಿಂದ ತನ್ನ ದೈನಂದಿನ ಚಟುವಟಿಕೆಗಳ ನಿರ್ವಹಣೆಗೆ ತೊಂದರೆ ಉಂಟಾಗುತ್ತದೆ. ಗ್ರಾಮೀಣ ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.