ADVERTISEMENT

ಮಹಿಳೆಯರು ಸೂಕ್ತವಯಸ್ಸಿನಲ್ಲಿ ತಾಯ್ತನ ಹೊಂದಲಿ: ಹಿಮಂತ

ಅಸ್ಸಾಂ: ಹೆಣ್ಣುಮಕ್ಕಳನ್ನು ಬಾಲ್ಯವಿವಾಹದಿಂದ ರಕ್ಷಿಸುವ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆ ಜಾರಿಗೆ ನಿರ್ಧಾರ

ಪಿಟಿಐ
Published 28 ಜನವರಿ 2023, 15:37 IST
Last Updated 28 ಜನವರಿ 2023, 15:37 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ‘ಮಹಿಳೆಯರು ಸೂಕ್ತ ವಯಸ್ಸಿನಲ್ಲಿ ಅಂದರೆ 22ರಿಂದ 30 ವರ್ಷ ವಯಸ್ಸಿನೊಳಗೆ ತಾಯ್ತನವನ್ನು ಹೊಂದಬೇಕು. ಇಲ್ಲದಿದ್ದರೆ ವೈದ್ಯಕೀಯವಾಗಿ ತೊಡಕುಗಳಾಗುವ ಸಾಧ್ಯತೆ ಇರುತ್ತದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಹೇಳಿದ್ದಾರೆ.

ಇಲ್ಲಿ ಶನಿವಾರ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹೆಣ್ಣುಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗುವುದು ಹಾಗೂ ತಾಯಿಯಾಗುವುದನ್ನು ತಡೆಗಟ್ಟುವ ಕುರಿತು ಕಾರ್ಯನಿರ್ವಹಿಸಲು ನಮ್ಮ ಸರ್ಕಾರವು ಬದ್ಧವಾಗಿದೆ’ ಎಂದರು.

ಹೆಣ್ಣುಮಕ್ಕಳನ್ನು ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ತಾಯಿಯಾಗುವುದರಿಂದ ರಕ್ಷಿಸಲು ಅಸ್ಸಾಂ ಸರ್ಕಾರವು ಕಠಿಣ ಕಾನೂನುಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಜಾರಿಗೆ ತರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹಿಮಂತ ಬಿಸ್ವಾ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ADVERTISEMENT

‘ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಗಂಡನಾದವನು, 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಅಪರಾಧ. ಹಾಗಾಗಿ, ಮುಂದಿನ ಐದು– ಆರು ತಿಂಗಳಲ್ಲಿ ಸಾವಿರಾರು ಗಂಡಂದಿರನ್ನು ಬಂಧಿಸಲಾಗುವುದು. ಅವರಲ್ಲಿ ಅನೇಕರು ಜೀವಾವಧಿ ಶಿಕ್ಷೆಯ ಅನುಭವಿಸಬೇಕಾದೀತು ’ ಎಂದೂ ಅವರು ಎಚ್ಚರಿಸಿದರು.

‘ಮಹಿಳೆಯರು ಹೆಚ್ಚು ಸಮಯ ಕಾಯಬಾರದು. 22ರಿಂದ 30 ವರ್ಷದ ನಡುವಿನ ವಯಸ್ಸು ತಾಯ್ತನಕ್ಕೆ ಸೂಕ್ತವಾದದ್ದು. ಇನ್ನೂ ಮದುವೆಯಾಗದ ಮಹಿಳೆಯರು ಬೇಗ ಮದುವೆಯಾಗಬೇಕು’ ಎಂದು ನಗುತ್ತಾ ಹೇಳಿದ ಶರ್ಮಾ, ‘ನಾವು ಅಪ್ರಾಪ್ತ ವಯಸ್ಸಿನಲ್ಲಿ ತಾಯ್ತನ ಹೊಂದುವ ಕುರಿತು ಮಾತನಾಡುತ್ತಿದ್ದೇವೆ. ಆದರೆ, ಬಹಳ ಸಮಯ ಕಾಯದೇ ಮಹಿಳೆಯರು ಸೂಕ್ತವಯಸ್ಸಿನಲ್ಲಿ ತಾಯಿಯಾಗುವುದರ ಕಡೆಗೂ ಗಮನ ನೀಡಬೇಕು. ಎಲ್ಲದಕ್ಕೂ ಸೂಕ್ತವಾದ ವಯಸ್ಸು ಇರುವ ರೀತಿಯಲ್ಲಿ ದೇವರು ನಮ್ಮ ದೇಹವನ್ನು ಸೃಷ್ಟಿಸಿದ್ದಾನೆ’ ಎಂದರು.

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಮದುವೆಯಾಗುವ ಪುರುಷರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲು ಅಸ್ಸಾಂ ಸಚಿವ ಸಂಪುಟವು ಸೋಮವಾರವಷ್ಟೇ ನಿರ್ಣಯ ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.