ADVERTISEMENT

ಕೋವಿಡ್‌ನಿಂದ ಒಂದೂ ಸಾವು ಆಗದಂತೆ ಕ್ರಮವಹಿಸಿದರಷ್ಟೇ ಪರೀಕ್ಷೆಗೆ ಅನುಮತಿ: ಸುಪ್ರೀಂ

12ನೇ ತರಗತಿ ಪರೀಕ್ಷೆ ನಡೆಸುವ ಆಂಧ್ರ ಪ್ರದೇಶ ಸರ್ಕಾರದ ತೀರ್ಮಾನ

ಪಿಟಿಐ
Published 24 ಜೂನ್ 2021, 11:00 IST
Last Updated 24 ಜೂನ್ 2021, 11:00 IST
ಸುಪ್ರೀಂ ಕೋರ್ಟ್‌–ಸಾಂದರ್ಭಿಕ ಚಿತ್ರ
ಸುಪ್ರೀಂ ಕೋರ್ಟ್‌–ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ 12ನೇ ತರಗತಿ ಪರೀಕ್ಷೆ ನಡೆಸುವ ಕುರಿತು ಆಂಧ್ರ ಪ್ರದೇಶ ಸರ್ಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಪೂರಕವಾಗಿ ಸಲ್ಲಿಸಿರುವ ಮುನ್ನೆಚ್ಚರಿಕಾ ಕ್ರಮಗಳು ತೃಪ್ತಿಕರವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

‘ಕೋವಿಡ್‌ನಿಂದ ಒಂದೇ ಒಂದು ಸಾವು ಕೂಡ ಸಂಭವಿಸಬಾರದು. ಈ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳು ತೃಪ್ತಿಕರವಾಗಿದ್ದರೆ ಮಾತ್ರ ಪರೀಕ್ಷೆ ನಡೆಸಲು ಅನುಮತಿ ನೀಡಬಹುದು‌ ಎಂದು ಸೂಚಿಸಿತು.

ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ 12ನೇ ತರಗತಿ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್‌ ಮತ್ತು ದಿನೇಶ್‌ ಮಹೇಶ್ವರಿ ಅವರ ವಿಶೇಷ ನ್ಯಾಯಪೀಠವು, 12ನೇ ತರಗತಿ ಪರೀಕ್ಷೆ ನಡೆಸುವ ಆಂಧ್ರಪ್ರದೇಶದ ನಿರ್ಧಾರದ ಕುರಿತು ಕಠಿಣ ಪ್ರಶ್ನೆಗಳನ್ನು ಆಂಧ್ರ ಸರ್ಕಾರ ಪರ ವಕೀಲರನ್ನು ಕೇಳಿತು.

ADVERTISEMENT

ಕೋವಿಡ್‌ ಕಾರಣದಿಂದ ಯಾರಾದರೂ ಮೃತಪಟ್ಟರೆ ಅವರಿಗೆ ನೀಡಬಹುದಾದ ಪರಿಹಾರದ ಅಂಶವನ್ನು ಈ ವೇಳೆ ಪರಿಶೀಲಿಸಲಾಗುವುದು. ಈಗಾಗಲೇ ಕೆಲ ರಾಜ್ಯಗಳು ಕೋವಿಡ್‌ನಿಂದ ಸಾವು ಸಂಭವಿಸಿದರೆ ₹ 1 ಕೋಟಿ ಪರಿಹಾರ ನೀಡುವುದಾಗಿ ಹೇಳಿವೆ ಎಂದು ಪೀಠ ಹೇಳಿತು.

ರಾಜ್ಯದಲ್ಲಿ 12ನೇ ತರಗತಿ ಪರೀಕ್ಷೆ ಬರೆಯುವ 5,19,510 ವಿದ್ಯಾರ್ಥಿಗಳಿದ್ದಾರೆ. ಪ್ರತಿ ತರಗತಿಯಲ್ಲಿ ಗರಿಷ್ಠ 15ರಿಂದ 18 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ಆಂಧ್ರ ಪರ ವಕೀಲರು ಪೀಠದ ಗಮನಕ್ಕೆ ತಂದರು.

ಈ ಸಂಖ್ಯೆಗಳನ್ನೇ ಆಧರಿಸಿ ನೋಡುವುದಾದರೆ, 34,644 ಕೊಠಡಿಗಳು ಬೇಕಾಗುತ್ತವೆ. ಅಷ್ಟು ನಿಮ್ಮ ಬಳಿ ಇವೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು.

ಪರೀಕ್ಷೆಯನ್ನು ನಡೆಸಬೇಕು ಎಂಬ ಕಾರಣಕ್ಕೆ ನಡೆಸುವುದು ಸರಿಯಲ್ಲ. ಇದು 5 ಲಕ್ಷ ವಿದ್ಯಾರ್ಥಿಗಳು ಮತ್ತು ಸಹಸ್ರಾರು ಪರೀಕ್ಷಾ ಮೇಲ್ವಿಚಾರಕರೂ ಸೇರಿದಂತೆ ಲಕ್ಷಾಂತರ ಪರೀಕ್ಷಾ ಸಿಬ್ಬಂದಿಯ ಜೀವದ ಪ್ರಶ್ನೆಯಾಗಿದೆ ಎಂದು ಪೀಠ ಖಾರವಾಗಿ ಹೇಳಿತು.

ಅಲ್ಲದೆ, ಕೋವಿಡ್‌ ಮೂರನೇ ಅಲೆ ಎದುರಾದರೆ, ರಾಜ್ಯ ಸರ್ಕಾರ ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದೂ ಪೀಠ ಪ್ರಶ್ನಿಸಿತು.

ಈ ಎಲ್ಲ ವಿಷಯಗಳನ್ನು ಒಳಗೊಂಡಂತೆ ಶುಕ್ರವಾರದೊಳಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಪೀಠ ಸೂಚಿಸಿತು. ಕೋವಿಡ್‌ ವಸ್ತುಸ್ಥಿತಿಯನ್ನು ಗಮನಿಸಿ ದೇಶದ ಹಲವು ರಾಜ್ಯಗಳು ಈಗಾಗಲೇ 12ನೇ ತರಗತಿ ಪರೀಕ್ಷೆ ನಡೆಸುವ ನಿರ್ಧಾರದಿಂದ ಹಿಂದೆ ಸರಿದು, ಪರೀಕ್ಷೆಗಳನ್ನು ರದ್ದುಗೊಳಿಸಿರುವುದನ್ನು ಪೀಠ ಬೊಟ್ಟುಮಾಡಿ ತೋರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.