ADVERTISEMENT

ಹೈಕೋರ್ಟ್‌ಗಳ ನೈತಿಕ ಸ್ಥೈರ್ಯ ಕುಗ್ಗಿಸುವುದಿಲ್ಲ –ಸುಪ್ರೀಂ ಕೋರ್ಟ್

ವಿಚಾರಣೆ ವೇಳೆ ವ್ಯಕ್ತವಾಗುವ ಅಭಿಪ್ರಾಯಗಳ ವರದಿಗಾರಿಕೆ ತಡೆಯಲಾಗದು –ಸುಪ್ರೀಂ ಕೋರ್ಟ್

ಪಿಟಿಐ
Published 3 ಮೇ 2021, 11:20 IST
Last Updated 3 ಮೇ 2021, 11:20 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಮುಕ್ತ ಚರ್ಚೆ ಅಗತ್ಯ ಎಂದು ಪ್ರತಿಪಾದಿಸಿರುವ ಸುಪ್ರೀಂ ಕೋರ್ಟ್‌, ಪ್ರಶ್ನಿಸುವ ಕುರಿತಂತೆ ಹೈಕೋರ್ಟ್‌ಗಳ ನೈತಿಕಸ್ಥೈರ್ಯ ಕುಗ್ಗಿಸುವುದಿಲ್ಲ ಅಥವಾ ಪಿಐಎಲ್‌ಗಳ ವಿಚಾರಣೆ ವೇಳೆ ವ್ಯಕ್ತವಾಗುವ ಮೌಖಿಕ ಅಭಿಪ್ರಾಯಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ತಡೆಯುವುದಿಲ್ಲ ಎಂದು ಸೋಮವಾರ ಹೇಳಿದೆ.

ಹೈಕೋರ್ಟ್‌ಗಳು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭಗಳು ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ. ‘ಚುನಾವಣಾ ಆಯೋಗದ ವಿರುದ್ಧ ಮದ್ರಾಸ್‌ ಹೈಕೋರ್ಟ್‌ ಅಭಿಪ್ರಾಯಗಳು ಅನಪೇಕ್ಷಿತ. ತಾನು ಎರಡು ಸಂವಿಧಾನಿಕ ಸಂಸ್ಥೆಗಳ ನಡುವೆ ಸಮತೋಲನ ಕಾಯ್ದುಕೊಳ್ಳಲಿದೆ’ ಎಂಬ ಆಯೋಗದ ಹೇಳಿಕೆಯನ್ನು ಕೋರ್ಟ್‌ ಪರಿಗಣಿಸಲಿದೆ ಎಂದು ಹೇಳಿತು.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ತೀವ್ರ ಏರಿಕೆಗೆ ಚುನಾವಣೆಯನ್ನು ನಡೆಸಿದ ಆಯೋಗದ ತೀರ್ಮಾನವೇ ಕಾರಣ ಎಂಬ ಮದ್ರಾಸ್‌ ಹೈಕೋರ್ಟ್‌ನ ಕಟು ಹೇಳಿಕೆಯ ವಿರುದ್ಧ ಚುನಾವಣಾ ಆಯೋಗವು ಸಲ್ಲಿಸಿದ್ದ ಮನವಿ ಕುರಿತಂತೆ ತನ್ನ ಆದೇಶವನ್ನು ನ್ಯಾಯಮೂರ್ತಿಗಳಾದ ಡಿ.ವೈಚಂದ್ರಚೂಡ ಮತ್ತು ಎಂ.ಆರ್‌.ಶಾ ಅವರಿದ್ದ ಪೀಠವು ಕಾಯ್ದಿರಿಸಿತು.

ADVERTISEMENT

ಹೈಕೋರ್ಟ್‌ನ ಅಭಿಪ್ರಾಯದ ಉದ್ದೇಶ ಸಾಂವಿಧಾನದ ಪೀಠದ ಸ್ಥೈರ್ಯವನ್ನು ಕುಗ್ಗಿಸುವುದು ಆಗಿರಲಿಲ್ಲ. ವಿಚಾರಣೆಯ ವೇಳೆ ಆಗಿನ ಸಂದರ್ಭದಲ್ಲಿ ಬಂದಿರಬಹುದಾದ ಮಾತುಗಳವು. ಹೀಗಾಗಿ, ಅದು ನ್ಯಾಯಾಂಗದ ಆದೇಶವಲ್ಲ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗಕ್ಕೆ ತಿಳಿಸಿತು.

ಚುನಾವಣಾ ಆಯೋಗ ಸಾಂವಿಧಾನಿಕವಾದ ಸಂಸ್ಥೆ. ಅದಕ್ಕೆ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಗಾರಿಕೆ ಇದೆ. ವ್ಯಕ್ತವಾದ ಅಭಿಪ್ರಾಯಗಳಿಂದ ಅದು ವಿಚಲಿತವಾಗಬಾರದು ಎಂದು ಹೇಳಿತು.

ಪ್ರಸ್ತುತ ಕಾಲದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯ ವೇಳೆಗೆ ವ್ಯಕ್ತವಾಗುವ ಅಭಿಪ್ರಾಯಗಳನ್ನು ವರದಿ ಮಾಡದಂತೆ ಮಾಧ್ಯಮಗಳನ್ನು ತಡೆಯಲಾಗದು. ಕೋರ್ಟ್‌ನಲ್ಲಿ ಬರುವ ಅಭಿಪ್ರಾಯಗಳು ಆದೇಶದಷ್ಟೇ ಮುಖ್ಯವಾದುದು.ಅಲ್ಲಿನ ಪ್ರಕ್ರಿಯೆಗಳು ಸಾರ್ವಜನಿಕ ಹಿತಾಸಕ್ತಿಯಿಂದಲೇ ಆಗುತ್ತವೆ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಅಭಿಪ್ರಾಯಗಳನ್ನು ಪಡೆಯಲು ವಕೀಲರಿಗೆ ಪ್ರಶ್ನೆ ಕೇಳುತ್ತಾರೆ. ಅದರರ್ಥ ಅವರು ವ್ಯಕ್ತಿ, ಸಂಸ್ಥೆಯ ವಿರುದ್ಧ ಎಂದರ್ಥವಲ್ಲ ಎಂದೂ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.