ADVERTISEMENT

World Environment Day 2025 | ‘ಸಿಂಧೂರ’ ಸಸಿ ನೆಟ್ಟ ಮೋದಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 15:17 IST
Last Updated 5 ಜೂನ್ 2025, 15:17 IST
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ಸಸಿ ನೆಟ್ಟು, ನೀರೆರೆದರು –ಪಿಟಿಐ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿನ ತಮ್ಮ ನಿವಾಸದಲ್ಲಿ ಗುರುವಾರ ಸಸಿ ನೆಟ್ಟು, ನೀರೆರೆದರು –ಪಿಟಿಐ ಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದ ಉದ್ಯಾನದಲ್ಲಿ ಗುರುವಾರ ‘ಸಿಂಧೂರ’ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಿದರು. 

1971ರ ಯುದ್ಧದಲ್ಲಿ ಅಸಾಧಾರಣ ಶೌರ್ಯ ತೋರಿದ್ದ ಮಹಿಳೆಯರ ಗುಂಪೊಂದು, ಇತ್ತೀಚೆಗೆ ಮೋದಿ ಅವರಿಗೆ ಚಂಡೀಗಢದಲ್ಲಿ ‘ಸಿಂಧೂರ’ ಸಸಿ ನೀಡಿತ್ತು. ಅದನ್ನು ತಮ್ಮ ನಿವಾಸದ ಉದ್ಯಾನದಲ್ಲಿ ನೆಡುವ ಭರವಸೆಯನ್ನು ಪ್ರಧಾನಿ ಅವರು ಆ ಗುಂಪಿಗೆ ನೀಡಿದ್ದರು.

‘ಈ ಸಸಿಯು ದೇಶದ ಮಹಿಳೆಯರ ಶೌರ್ಯ ಮತ್ತು ಧೈರ್ಯದ ಪ್ರತೀಕ’ ಎಂದು ಮೋದಿ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇತ್ತೀಚೆಗೆ ನಡೆದ ‘ಆಪರೇಷನ್‌ ಸಿಂಧೂರ’ದ ಗೌರವಾರ್ಥಕವಾಗಿಯೂ ಈ ಸಸಿಯನ್ನು ಪರಿಗಣಿಸಲಾಗುತ್ತಿದೆ. 

ADVERTISEMENT

‘ಜಾಗತಿಕ ಹವಾಮಾನದ ರಕ್ಷಣೆಗಾಗಿ ಪ್ರತಿಯೊಂದು ದೇಶವು ಸ್ವಹಿತಾಸಕ್ತಿಯನ್ನು ಮೀರಿ ನಿಲ್ಲಬೇಕು. ಪ್ಲಾಸ್ಟಿಕ್‌ನಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ಕೊನೆಗೊಳಿಸುವುದು ಈ ವರ್ಷದ ವಿಶ್ವ ಪರಿಸರ ದಿನದ ವಿಷಯವಾಗಿದೆ. ಭಾರತವು ನಾಲ್ಕು– ಐದು ವರ್ಷಗಳಿಂದ ನಿರಂತರವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ’ ಎಂದು ಮೋದಿ ಅವರು ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

ಇಲ್ಲಿನ ಭಗವಾನ್‌ ಮಹಾವೀರ ವನಸ್ಥಲಿ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ‘ಏಕ್‌ ಪೇಡ್‌ ಮಾ ಕೆ ನಾಮ್‌’ ಕಾರ್ಯಕ್ರಮದಲ್ಲಿ ಭಾಗಿಯಾದ ಅವರು ಸಸಿ ನೆಟ್ಟು, ನೀರೆರೆದರು.

ಎಲೆಕ್ಟ್ರಿಕ್‌ ಬಸ್‌ಗಳಿಗೆ ಚಾಲನೆ: 

ಸುಸ್ಥಿರ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ದೆಹಲಿ ಸರ್ಕಾರದ ಮಹತ್ವಕಾಂಕ್ಷಿಯ ಎಲೆಕ್ಟ್ರಿಕ್‌ ಬಸ್‌ಗಳಿಗೆ ಮೋದಿ ಅವರು ಇದೇ ವೇಳೆ ಚಾಲನೆ ನೀಡಿದರು. ಇದು ದೆಹಲಿಯ ಜನರ ಸುಗಮ ಜೀವನಕ್ಕೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.