ADVERTISEMENT

2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಉದ್ಯೋಗ ಇಲ್ಲ: ಯುಪಿಯಲ್ಲಿ ಹೊಸ ಕಾನೂನು

ಪಿಟಿಐ
Published 10 ಜುಲೈ 2021, 22:56 IST
Last Updated 10 ಜುಲೈ 2021, 22:56 IST
ಯೋಗಿ ಆದಿತ್ಯನಾಥ್: ಸಂಗ್ರಹ ಚಿತ್ರ
ಯೋಗಿ ಆದಿತ್ಯನಾಥ್: ಸಂಗ್ರಹ ಚಿತ್ರ   

ಲಖನೌ: ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಚುನಾವಣೆಗೆ ಸ್ಪರ್ಧಿಸದಂತೆ ಮತ್ತು ಸರ್ಕಾರಿ ಉದ್ಯೋಗಕ್ಕೆ ಸೇರುವುದನ್ನು ನಿರ್ಬಂಧಿಸುವ ಕಠಿಣ ಕಾನೂನು ಜಾರಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ.

ಪ್ರಸ್ತಾವಿತ ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡಿನ ಪ್ರಕಾರ, ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸುವವರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವುದರಿಂದ, ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಥವಾ ಬಡ್ತಿ ಪಡೆಯುವುದರಿಂದ ಮತ್ತು ಯಾವುದೇ ರೀತಿಯ ಸರ್ಕಾರಿ ಸಬ್ಸಿಡಿ ಪಡೆಯುವುದನ್ನು ನಿರ್ಬಂಧಿಸಲಾಗುತ್ತದೆ.

ಉತ್ತರ ಪ್ರದೇಶ ರಾಜ್ಯದ ಕಾನೂನು ಆಯೋಗ (ಯುಪಿಎಸ್ಎಲ್‌ಸಿ) ಹೇಳುವಂತೆ ಈ ನಿಯಮಗಳು ಉತ್ತರಪ್ರದೇಶದ ಜನಸಂಖ್ಯೆ (ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣ) ಮಸೂದೆ, 2021 ಎಂಬ ಕರಡಿನ ಭಾಗವಾಗಿವೆ.

ADVERTISEMENT

‘ರಾಜ್ಯ ಕಾನೂನು ಆಯೋಗವು ರಾಜ್ಯದ ಜನಸಂಖ್ಯೆಯ ನಿಯಂತ್ರಣ, ಸ್ಥಿರೀಕರಣ ಮತ್ತು ಕಲ್ಯಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದು, ಕರಡು ಮಸೂದೆಯನ್ನು ಸಿದ್ಧಪಡಿಸಿದೆ’ ಎಂದು ಯುಪಿಎಸ್ಎಲ್‌ಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕರಡು ಮಸೂದೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದ್ದು, ಜುಲೈ 19 ಕೊನೆಯ ದಿನವಾಗಿದೆ.

‘ಎರಡು ಮಕ್ಕಳ ಯೋಜನೆ ಅಳವಡಿಸಿಕೊಳ್ಳುವ ಸರ್ಕಾರಿ ನೌಕರರು ಇಡೀ ಸೇವೆಯ ಸಮಯದಲ್ಲಿ ಎರಡು ಹೆಚ್ಚುವರಿ ಇನ್‌ಕ್ರಿಮೆಂಟ್ ಪಡೆಯುತ್ತಾರೆ. ಇದರ ಜೊತೆಗೆ, ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಉದ್ಯೋಗದಾತರ ಕೊಡುಗೆ ನಿಧಿಯಲ್ಲಿ ಮೂರು ಶೇ. 3ರಷ್ಟು ಹೆಚ್ಚಳ ಮತ್ತು ಪೂರ್ಣ ಸಂಬಳದೊಂದಿಗೆ 12 ತಿಂಗಳ ಮಾತೃತ್ವ ಮತ್ತು ಪಿತೃತ್ವ ರಜೆ.’ ಮುಂತಾದ ಪ್ರಸ್ತಾಪಗಳು ಈ ಕರಡು ಮಸೂದೆಯಲ್ಲಿವೆ.

ಕಾಯಿದೆಯ ಅನುಷ್ಠಾನಕ್ಕಾಗಿ ರಾಜ್ಯ ಜನಸಂಖ್ಯಾ ನಿಧಿಯನ್ನು ರಚಿಸಲಾಗುವುದು. ಸರ್ಕಾರದ ಕರ್ತವ್ಯಗಳನ್ನು ಪಟ್ಟಿ ಮಾಡಿ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾತೃತ್ವ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ.

ಆರೋಗ್ಯ ಕೇಂದ್ರಗಳು ಮತ್ತು ಎನ್‌ಜಿಒಗಳು ಗರ್ಭನಿರೋಧಕ ಮಾತ್ರೆಗಳು, ಕಾಂಡೋಮ್‌ ಇತ್ಯಾದಿಗಳನ್ನು ವಿತರಿಸುತ್ತವೆ, ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ಕುಟುಂಬ ಯೋಜನೆ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸುತ್ತವೆ ಮತ್ತು ರಾಜ್ಯದಾದ್ಯಂತ ಗರ್ಭಧಾರಣೆ, ಹೆರಿಗೆ, ಜನನ ಮತ್ತು ಸಾವುಗಳ ಕಡ್ಡಾಯ ನೋಂದಣಿಯನ್ನು ಖಚಿತಪಡಿಸುತ್ತವೆ ಎಂದು ಮಸೂದೆ ಹೇಳುತ್ತದೆ.

ಎಲ್ಲಾ ಮಾಧ್ಯಮಿಕ ಶಾಲೆಗಳಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಸಂಬಂಧಿಸಿದ ಕಡ್ಡಾಯ ವಿಷಯವನ್ನು ಪರಿಚಯಿಸುವುದು ಸರ್ಕಾರದ ಕರ್ತವ್ಯ ಎಂದು ಕರಡು ಮಸೂದೆ ಹೇಳುತ್ತದೆ.

ಉತ್ತೇಜನ ಕ್ರಮ
ಎರಡು ಮಕ್ಕಳ ನೀತಿಯನ್ನು ಪಾಲಿಸುವಂತೆ ಮತ್ತು ಪಾಲಿಸುವವರಿಗೆ ಉತ್ತೇಜನ ನೀಡುವ ಸಲುವಾಗಿ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆಯಲ್ಲಿ ಕೆಲವಾರು ಕ್ರಮಗಳನ್ನು ಸೂಚಿಸಲಾಗಿದೆ. ಎರಡು ಮಕ್ಕಳ ನೀತಿಯನ್ನು ಅನುಸರಿಸುವ ಸರ್ಕಾರಿ ನೌಕರರಿಗೆ ಇದು ಅನ್ವಯವಾಗುತ್ತದೆ ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ

*ಒಟ್ಟು ಸೇವಾವಧಿಯಲ್ಲಿ ಎರಡು ಹೆಚ್ಚುವರಿ ವೇತನ ಬಡ್ತಿ

*ಪೂರ್ಣ ವೇತನ ಮತ್ತು ಭತ್ಯೆ ಸಹಿತ 12 ತಿಂಗಳ ಅವಧಿಯ ತಾಯ್ತನ/ಪಿತೃತ್ವ ರಜೆ

*ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿ, ಉದ್ಯೋಗದಾತರ ಕೊಡುಗೆಯಲ್ಲಿ ಶೇ 3ರಷ್ಟು ಹೆಚ್ಚುವರಿ ಕೊಡುಗೆ

ಜಾಗೃತಿ ಮತ್ತು ಅನುಷ್ಠಾನ
ಜನಸಂಖ್ಯೆ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಮತ್ತು ಜನಸಂಖ್ಯೆ ನಿಯಂತ್ರಣವನ್ನು ಅನುಷ್ಠಾನಕ್ಕೆ ತರಲು ಒಂದು ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕರಡು ಮಸೂದೆಯಲ್ಲಿ ಹೇಳಲಾಗಿದೆ

*ಜನಸಂಖ್ಯೆ ನಿಯಂತ್ರಣ ಕಾರ್ಯಕ್ರಮವನ್ನು ಸಾಧಿಸಲು ರಾಜ್ಯ ನಿಧಿಯೊಂದನ್ನು ಸ್ಥಾಪಿಸಬೇಕು

*ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಯ್ತನ ಆರೈಕೆ ಕೇಂದ್ರಗಳನ್ನು ಆರಂಭಿಸಬೇಕು

*ಈ ಕೇಂದ್ರಗಳು ಮತ್ತು ಸ್ವಯಂಸೇವಾ ಸಂಘಟನೆಗಳ ನೆರವಿನೊಂದಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಬೇಕು

*ಈ ಕೇಂದ್ರಗಳ ಮೂಲಕ ಗರ್ಭಧಾರಣೆ ನಿರೋಧಕ ಮಾತ್ರೆಗಳು ಮತ್ತು ಸಲಕರಣೆಗಳನ್ನು ವಿತರಣೆ ಮಾಡಬೇಕು

*ಕುಟುಂಬ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಮುದಾಯ ಆರೋಗ್ಯ ಕಾರ್ಯಕರ್ತರ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು

*ಗರ್ಭಧಾರಣೆ, ಹೆರಿಗೆ, ಜನನ ಮತ್ತು ಮರಣ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕು

*ಪ್ರೌಢಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಕಡ್ಡಾಯವಾಗಿ ಬೋಧಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.