ADVERTISEMENT

8 ದಿನದ ಬಳಿಕ 13 ಜನರಿದ್ದ ವಾಯುಪಡೆ ವಿಮಾನ 12ಸಾವಿರ ಅಡಿ ಎತ್ತರ ಸ್ಥಳದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:08 IST
Last Updated 11 ಜೂನ್ 2019, 16:08 IST
   

ಗುವಾಹಟಿ: ಎಂಟು ದಿನಗಳ ಹಿಂದೆ ನಾಪತ್ತೆಯಾದ ಎಎನ್‌–32 ವಿಮಾನದ ಅವಶೇಷಗಳು ಪತ್ತೆಯಾಗಿವೆ. ಅರುಣಾಚಲ ಪ್ರದೇಶದ ಸಿಯಾಂಗ್‌ ಜಿಲ್ಲೆಯ ಲಿಪೊ ಎಂಬಲ್ಲಿಂದ 16 ಕಿ.ಮೀ. ಉತ್ತರದಲ್ಲಿ ಸಮುದ್ರ ಮಟ್ಟದಿಂದ 12 ಸಾವಿರ ಅಡಿ ಎತ್ತರದ ಪ್ರದೇಶದಲ್ಲಿ ಅವಶೇಷಗಳನ್ನು ಎಂಐ–17 ಹೆಲಿಕಾಪ್ಟರ್‌ ಪತ್ತೆ ಮಾಡಿದೆ.

ಭಾರತೀಯ ವಾಯುಪಡೆಯ ಎಎನ್‌–32 ವಿಮಾನದಲ್ಲಿ 13 ಮಂದಿ ಇದ್ದರು. ಅವರ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮುಂದುವರಿದಿದೆ ಎಂದು ವಾಯುಪಡೆಯ ವಕ್ತಾರ ವಿಂಗ್‌ ಕಮಾಂಡರ್‌ ರತ್ನಾಕರ್‌ ಸಿಂಗ್‌ ತಿಳಿಸಿದ್ದಾರೆ.

ವಿಮಾನವು ಅಸ್ಸಾಂನ ಜೊರ್ಹಾಟ್‌ ವಾಯುಪಡೆ ನೆಲೆಯಿಂದಜೂನ್‌ 3ರಂದು ಮಧ್ಯಾಹ್ನ 12.27ಕ್ಕೆ ಹೊರಟಿತ್ತು. ಎಂಟು ಮಂದಿ ವಿಮಾನ ಸಿಬ್ಬಂದಿ ಮತ್ತು ವಾಯುಪಡೆಯ ಐವರು ಸಿಬ್ಬಂದಿ ಅರುಣಾಚಲ ಪ್ರದೇಶದ ಮೆಚುಕಾ ಎಂಬಲ್ಲಿಗೆ ಹೋಗಬೇಕಿತ್ತು. ಇದು ಚೀನಾ ಗಡಿಯಲ್ಲಿರುವ ಪ್ರದೇಶ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ವಿಮಾನವು ಸಂಪರ್ಕ ಕಡಿದುಕೊಂಡಿತ್ತು. ಆ ಸಮಯದಲ್ಲಿ ವಿಮಾನವು ಪಶ್ಚಿಮ ಸಿಯಾಂಗ್‌ ಜಿಲ್ಲೆಯ ಕೇಂದ್ರ ಸ್ಥಾನ ಅಲಾಂಗ್‌ ಸಮೀಪದಲ್ಲಿತ್ತು.

ADVERTISEMENT

ಮೆಚುಕಾದಂತಹ ದುರ್ಗಮ ಪ್ರದೇಶಗಳಿಗೆ ಸೇನಾ ಸಿಬ್ಬಂದಿ ಮತ್ತು ಸರಕುಗಳನ್ನು ಸಾಗಿಸಲು ಎಎನ್‌–32 ವಿಮಾನಗಳನ್ನು ಬಳಸಲಾಗುತ್ತಿದೆ. ಇಂತಹ ಪ್ರದೇಶದ ನಾಗರಿಕರಿಗೂ ಈ ವಿಮಾನದ ಸೇವೆ ಒದಗಿಸಲಾಗುತ್ತಿದೆ. ಮೆಚುಕಾ ಸಮುದ್ರ ಮಟ್ಟದಿಂದ ಸುಮಾರು 6 ಸಾವಿರ ಅಡಿ ಎತ್ತರದಲ್ಲಿದೆ.

ಭಾರಿ ಶೋಧ:ನಾಲ್ಕು ಎಂಐ–17, ಮೂರು ಎಎಲ್‌ಎಚ್‌, ಎರಡು ಎಸ್‌ಯು–30 ಎಂಕೆಐ, ಒಂದು ಸಿ–130 ಮತ್ತು ಎರಡು ಚೀತಾ ಹೆಲಿಕಾಪ್ಟರ್‌ಗಳು, ಸೇನೆಯ ಒಂದು ಡ್ರೋನ್‌, ವಾಯುಪಡೆಯ ಶೋಧ ವಿಮಾನ ಮುಂತಾದವುಗಳನ್ನು ಹುಡುಕಾಟಕ್ಕೆ ಬಳಸಿಕೊಳ್ಳಲಾಗಿತ್ತು. ಮೋಡ ಮುಸುಕಿದ ವಾತಾವರಣ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಶೋಧಕ್ಕೆ ಅಡ್ಡಿ ಉಂಟಾಗಿತ್ತು.

ಸ್ಥಳೀಯರ ಎರಡು ತಂಡಗಳನ್ನು ರಚಿಸಿ ಕಾಡಿನೊಳಗೆ ವಿಮಾನದ ಅವಶೇಷ ಪತ್ತೆ ಮಾಡುವ ಯತ್ನ ನಡೆಸಲಾಗಿತ್ತು. ಆದರೆ ಈ ಪ್ರಯತ್ನದಲ್ಲಿಯೂ ಎಎನ್‌–32 ವಿಮಾನದ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ವಿಮಾನದ ಬಗ್ಗೆ ಸುಳಿವು ಕೊಟ್ಟವರಿಗೆ ₹5 ಲಕ್ಷ ಬಹುಮಾನ ಕೊಡುವುದಾಗಿ ವಾಯುಪಡೆ ಘೋಷಿಸಿತ್ತು. ₹50 ಸಾವಿರ ಬಹುಮಾನ ಕೊಡುವುದಾಗಿ ಪಶ್ಚಿಮ ಸಿಯಾಂಗ್‌ ಜಿಲ್ಲಾಡಳಿತ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.