ADVERTISEMENT

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜತೆಗೆ ಕುಸ್ತಿಪಟುಗಳ ಮಾತುಕತೆ ಆರಂಭ

ಪಿಟಿಐ
Published 7 ಜೂನ್ 2023, 7:59 IST
Last Updated 7 ಜೂನ್ 2023, 7:59 IST
'ಕಪ್ಪು ಪಟ್ಟಿ' ಧರಿಸಿ ಪ್ರತಿಭಟಿಸಿದ ಕುಸ್ತಿಪಟುಗಳು
'ಕಪ್ಪು ಪಟ್ಟಿ' ಧರಿಸಿ ಪ್ರತಿಭಟಿಸಿದ ಕುಸ್ತಿಪಟುಗಳು   

ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲೂಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ನಡೆಸುತ್ತಿರುವ ಧರಣಿಗೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಹಾಗೂ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ ಅವರ ನಡುವೆ ಮಾತುಕತೆ ಬುಧವಾರ ಆರಂಭವಾಗಿದೆ.

ಅನುರಾಗ್ ಠಾಕೂರ್ ಅವರ ನಿವಾಸದಲ್ಲಿ ಸಭೆ ನಡೆಯುತ್ತಿದೆ. ಪೂನಿಯಾ, ರಿಯೊ ಒಲಿಂಪಿಕ್‌ನಲ್ಲಿ ಕಂಚು ಪದಕ ಪಡೆದ ಸಾಕ್ಷಿ ಮಲ್ಲಿಕ್ ಹಾಗು ಆಕೆಯ ಪತಿ ಸತ್ಯವ್ರತ ಕೊಡಿಯಾನ್ ಅವರು ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪದಡಿ ಬ್ರಜ್‌ಭೂಷಣ್ ಬಂಧನಕ್ಕೆ ಆಗ್ರಹಿಸಿರುವ ಕುಸ್ತಿಪಟುಗಳು, ಬಂಧನವಾಗುವವರೆಗೂ ಧರಣಿ ಮುಂದುವರಿಸುವ ನಿರ್ಧಾರ ಮಾಡಿದ್ದಾರೆ. ಇದರ ಬೆನ್ನಲ್ಲೇ ಸಚಿವ ಅನುರಾಗ್ ಸಭೆಗೆ ಆಹ್ವಾನ ನೀಡಿದ್ದರು.

ADVERTISEMENT

ಸರ್ಕಾರ ಮತ್ತು ಕುಸ್ತಿಪಟುಗಳ ನಡುವೆ ಕಳೆದ ಐದು ದಿನಗಳಲ್ಲಿ ನಡೆಯುತ್ತಿರುವ ಎರಡನೇ ಸಂಧಾನ ಸಭೆ ಇದಾಗಿದೆ. ಕುಸ್ತಿಪಟುಗಳು ಈಗಾಗಲೇ ಗೃಹ ಸಚಿವ ಅಮಿತ್ ಶಾ ಅವರನ್ನು ಶನಿವಾರ ಭೇಟಿ ಮಾಡಿ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದರು.

ವಿನೇಶಾ ಫೋಗಟ್‌ ಅವರು ತಮ್ಮ ಊರಾದ ಹರಿಯಾಣದ ಬಲಾಲಿ ಗ್ರಾಮದಲ್ಲಿ ನಿಗದಿಯಾಗಿದ್ದ ಪಂಚಾಯತ್‌ನಲ್ಲಿ ಪಾಲ್ಗೊಂಡಿರುವುದರಿಂದ ಅವರು ಈ ಸಭೆಗೆ ಹಾಜರಾಗಿಲ್ಲ. 

ಕಳೆದ ಏ. 23ರಿಂದ ಇಲ್ಲಿನ ಜಂತರ್‌ ಮಂತರ್‌ನಲ್ಲಿ ಮುಷ್ಕರ ಆರಂಭಿಸಿರುವ ಕುಸ್ತಿಪಟುಗಳು ಬ್ರಜ್‌ಭೂಷಣ್ ಬಂಧನಕ್ಕೆ ಆಗ್ರಹಿಸಿ ಹೋರಾಟ ನಡೆಸಿದ್ದರು. ಮೇ 28ರಂದು ಹೊಸ ಸಂಸತ್‌ಭವನಕ್ಕೆ ಪಾದಯಾತ್ರೆ ನಡೆಸಲು ಮುಂದಾದಾಗ ಇವರನ್ನು ಪೊಲೀಸರು ಬಂಧಿಸಿದ್ದರು.  ಕುಸ್ತಿಪಟುಗಳ ಧರಣಿಗೆ ಭಾರತೀಯ ಕಿಸಾನ್ ಯೂನಿಯನ್‌ನ ಮುಖಂಡ ರಾಕೇಶ್ ಟಿಕಾಯತ್ ಅವರು ಬೆಂಬಲ ಸೂಚಿಸಿದ್ದಾರೆ. 

ಕುಸ್ತಿಪಟುಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಆದರೆ ಬಿಜೆಪಿ ಸಂಸದರಾಗಿರುವ ಬ್ರಿಜ್‌ಭೂಷಣ್ ಅವರ ಬಂಧನದ ಬೇಡಿಕೆ ಈಡೇರಿಕೆಯೇ ಕಗ್ಗಂಟಾಗಿ ಉಳಿದಿದೆ. ಈ ನಡುವೆ ಉತ್ತರ ರೈಲ್ವೆಯಲ್ಲಿ ಉದ್ಯೋಗದಲ್ಲಿರುವ ಕೆಲ ಕುಸ್ತಿಪಟುಗಳು ತಮ್ಮ ಕೆಲಸಕ್ಕೆ ಮರಳಿದ್ದಾರೆ. 

’ಕ್ರೀಡೆಗೆ ಯಾವುದೇ ನಷ್ಟವಾಗಬಾರದು ಎಂಬುದು ನಮ್ಮ ಉದ್ದೇಶ. ಕುಸ್ತಿಪಟುಗಳು ಸಾಕರಾತ್ಮಕವಾಗಿದ್ದಾರೆ. ವಿವಾದ ಇಂದು ಇತ್ಯರ್ಥವಾಗುವ ಸಾಧ್ಯತೆ ಇದೆ. ‘ ಎಂದು ಕ್ರೀಡಾ ಮಂತ್ರಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.