ADVERTISEMENT

9ರೊಳಗೆ ಬ್ರಿಜ್‌ಭೂಷಣ್‌ ಬಂಧಿಸಿ: ‘ಖಾಪ್‌ ಮಹಾಪಂಚಾಯತ್‌’ ಕೇಂದ್ರ ಸರ್ಕಾರಕ್ಕೆ ಗಡುವು

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 15:52 IST
Last Updated 2 ಜೂನ್ 2023, 15:52 IST
ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟದ ಮುಂದಿನ ಹೆಜ್ಜೆ ಕುರಿತು ಚರ್ಚಿಸಲು ಹರಿಯಾಣದ ಕುರುಕ್ಷೇತ್ರದಲ್ಲಿ ಶುಕ್ರವಾರ ನಡೆದ ‘ಖಾಪ್‌ ಮಹಾಪಂಚಾಯತ್‌’ ಉದ್ದೇಶಿಸಿ ಭಾರತೀಯ ಕಿಸಾನ್‌ ಯೂನಿಯನ್ ನಾಯಕ ರಾಕೇಶ್‌ ಟಿಕಾಯತ್‌ ಮಾತನಾಡಿದರು –‍ಪಿಟಿಐ ಚಿತ್ರ
ಕುಸ್ತಿಪಟುಗಳು ನಡೆಸುತ್ತಿರುವ ಹೋರಾಟದ ಮುಂದಿನ ಹೆಜ್ಜೆ ಕುರಿತು ಚರ್ಚಿಸಲು ಹರಿಯಾಣದ ಕುರುಕ್ಷೇತ್ರದಲ್ಲಿ ಶುಕ್ರವಾರ ನಡೆದ ‘ಖಾಪ್‌ ಮಹಾಪಂಚಾಯತ್‌’ ಉದ್ದೇಶಿಸಿ ಭಾರತೀಯ ಕಿಸಾನ್‌ ಯೂನಿಯನ್ ನಾಯಕ ರಾಕೇಶ್‌ ಟಿಕಾಯತ್‌ ಮಾತನಾಡಿದರು –‍ಪಿಟಿಐ ಚಿತ್ರ    

ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್ ಅವರನ್ನು ಜೂನ್ 9ರ ಒಳಗಾಗಿ ಬಂಧಿಸಬೇಕು. ತಪ್ಪಿದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ‘ಖಾಪ್‌ ಮಹಾಪಂಚಾಯತ್‌’ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ಎಚ್ಚರಿಕೆ ನೀಡಿದೆ.

ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕುಸ್ತಿಪಟುಗಳ ನಡೆಸುತ್ತಿರುವ ಹೋರಾಟ ಕುರಿತು ಚರ್ಚಿಸಲು ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ‘ಮಹಾಪಂಚಾಯತ್‌’ ಕೈಗೊಂಡ ಈ ನಿರ್ಣಯವನ್ನು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್‌ ಟಿಕಾಯತ್‌ ಪ್ರಕಟಿಸಿದರು.

‘ಗಡುವಿನೊಳಗಾಗಿ ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ಬಂಧಿಸದಿದ್ದಲ್ಲಿ ದೇಶದಾದ್ಯಂತ ಪಂಚಾಯತ್‌ಗಳನ್ನು ಆಯೋಜಿಸಲಾಗುವುದು. ದೆಹಲಿಯ ಜಂತರ್‌ ಮಂಥರ್‌ನಲ್ಲಿ ಕುಸ್ತಿಪಟುಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು’ ಎಂದು ಹೇಳಿದರು.

ADVERTISEMENT

‘ಕುಸ್ತಿಪಟುಗಳ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಕೂಡ ಹಿಂತೆಗೆದುಕೊಳ್ಳಬೇಕು. ಬ್ರಿಜ್‌ಭೂಷಣ್‌ ಸಿಂಗ್‌ ಅವರನ್ನು ಗಡುವಿನೊಳಗೆ ಬಂಧಿಸಲೇಬೇಕು. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಟಿಕಾಯತ್‌ ಸ್ಪಷ್ಟಪಡಿಸಿದರು.

ಸಭೆ: ಇದಕ್ಕೂ ಮುನ್ನ, ‘ಮಹಾಪಂಚಾಯತ್‌’ ಉದ್ದೇಶಿಸಿ ಮಾತನಾಡಿದ ಟಿಕಾಯತ್, ‘ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ 7–10 ದಿನಗಳ ಅವಕಾಶ ನೀಡಬೇಕು. ಕುರುಕ್ಷೇತ್ರದಲ್ಲಿ ನಡೆದ ಖಾಪ್‌ ಪಂಚಾಯತ್‌ನಿಂದ ಸಂಬಂಧಪಟ್ಟವರಿಗೆ ದೊಡ್ಡ ಸಂದೇಶ ರವಾನಿಸಬೇಕು’ ಎಂದರು.

‘ಅಯೋಧ್ಯೆಯಲ್ಲಿ ಜೂನ್‌ 5ರಂದು ಬ್ರಿಜ್‌ಭೂಷಣ್‌ ಸಿಂಗ್‌ ನೇತೃತ್ವದಲ್ಲಿ ನಡೆಸಲು ಉದ್ದೇಶಿಸಿದ್ದ ಬೃಹತ್‌ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಖಾಪ್‌ ಮಹಾಪಂಚಾಯತ್‌ನ ಒತ್ತಡವೇ ಕಾರಣ’ ಎಂದು ಟಿಕಾಯತ್‌ ಹೇಳಿದರು.

ಎಫ್‌ಐಆರ್ ಬಹಿರಂಗ: ಏಳು ಮಹಿಳಾ ಕುಸ್ತಿಪಟುಗಳು ನೀಡಿದ ದೂರುಗಳ ಆಧಾರದಲ್ಲಿ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

‘ಆರೋಪಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅನುಚಿತವಾಗಿ ಸ್ಪರ್ಶಿಸುವುದು, ಚುಂಬಿಸುವುದು ಮಾಡುತ್ತಿದ್ದ ಅವರು, ಬೆದರಿಕೆಯನ್ನೂ ಒಡ್ಡುತ್ತಿದ್ದರು’ ಎಂಬ ಅರೋಪಗಳನ್ನು ಎಫ್‌ಐಆರ್‌ನಲ್ಲಿ ಮಾಡಲಾಗಿದೆ. ಎಫ್‌ಐಆರ್‌ಗಳಲ್ಲಿನ ಈ ಅಂಶಗಳು ಶುಕ್ರವಾರ ಬಹಿರಂಗಗೊಂಡಿವೆ. 

ಜೂನ್‌ 9ರ ಒಳಗಾಗಿ ಬ್ರಿಜ್‌ಭೂಷಣ್‌ ಸಿಂಗ್‌ರನ್ನು ಬಂಧಿಸಬೇಕು ಎಂಬ ನಿರ್ಣಯವನ್ನು ಖಾಪ್‌ ಮಹಾಪಂಚಾಯತ್ ಶುಕ್ರವಾರವೇ ತೆಗೆದುಕೊಂಡಿದ್ದು ಗಮನಾರ್ಹ.

ಕುಸ್ತಿಪಟುಗಳಿಗೆ ನ್ಯಾಯ ಸಿಗಬೇಕು ಎಂಬುದು ಪ್ರತಿಯೊಬ್ಬರ ಬಯಕೆ. ಕಾನೂನಿನ ಪ್ರಕಾರವೇ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕ್ರಮ ಜರುಗಿಸಲಾಗುತ್ತದೆ

-ಅನುರಾಗ್‌ ಠಾಕೂರ್‌ ಕೇಂದ್ರ ಕ್ರೀಡಾ ಸಚಿವ

ಬ್ರಿಜ್‌ಭೂಷಣ್‌ ರ‍್ಯಾಲಿಗೆ ಅನುಮತಿ ನಿರಾಕರಣೆ

ಅಯೋಧ್ಯಾ: ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ಅವರು ಅಯೋಧ್ಯೆಯಲ್ಲಿ ಇದೇ 5ರಂದು ನಡೆಸಲು ಉದ್ದೇಶಿಸಿದ್ದ ‘ಜನ ಚೇತನ ಮಹಾರ‍್ಯಾಲಿ’ಗೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಇನ್ನೊಂದೆಡೆ ‘ಕೆಲ ಕುಸ್ತಿಪಟುಗಳು ನನ್ನ ವಿರುದ್ಧ ಮಾಡಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ರಾಮಕಥಾ ಪಾರ್ಕ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಜನ ಚೇತನ ರ‍್ಯಾಲಿಯನ್ನು ಕೆಲ ದಿನಗಳ ಮಟ್ಟಿಗೆ ಮುಂದೂಡಿದ್ದೇನೆ’ ಎಂದು ಬ್ರಿಜ್‌ಭೂಷಣ್‌ ಸಿಂಗ್ ಹೇಳಿದ್ದಾರೆ.

‘ಅವಸರದ ನಿರ್ಧಾರ ಕೈಗೊಳ್ಳದಿರಿ’

ನವದೆಹಲಿ: ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗಾ ನದಿಗೆ ಹಾಕಿಬಿಡುವ ಕಠಿಣ ನಿರ್ಧಾರಕ್ಕಿಳಿಯುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ 1983ರ ವಿಶ್ವಕಪ್‌ ವಿಜೇತ ಭಾರತ ಕ್ರಿಕೆಟ್ ತಂಡದ ಆಟಗಾರರು ಅವಸರದ ನಿರ್ಧಾರಕ್ಕೆ ಬರಬಾರದು ಎಂದು ಅವರಿಗೆ ಮನವಿ ಮಾಡಿದ್ದಾರೆ. ಪ್ರಮುಖ ಮಹಿಳಾ ಕುಸ್ತಿಪಟುಗಳ ಅಹವಾಲುಗಳನ್ನು ಸರ್ಕಾರ ಆಲಿಸಿ ಸಮಸ್ಯೆ ಬಗೆಹರಿಸಬಹುದೆಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಚಾಂಪಿಯನ್‌ ಕುಸ್ತಿಪಟುಗಳ ಮೇಲೆ ಈ ರೀತಿ ಆಗುತ್ತಿರುವ ದೃಶ್ಯಗಳು ಮನಸ್ಸಿಗೆ ಖೇದ ಉಂಟುಮಾಡಿವೆ. ಗಂಗಾ ನದಿಗೆ ಪದಕಗಳನ್ನು ಎಸೆಯುವ ನಿರ್ಧಾರವೂ ನಮಗೆ ಕಳವಳ ಉಂಟುಮಾಡಿದೆ’ ಎಂದು 1983ರ ವಿಶ್ವಕಪ್ ತಂಡ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

‘ವರ್ಷಗಳ ಪರಿಶ್ರಮ ತ್ಯಾಗ ಛಲದ ಫಲ ಈ ಪದಕಗಳ ಹಿಂದೆಯಿದೆ. ಅದು ಅವರಿಗೆ ಮಾತ್ರ ಸಲ್ಲುವುದಲ್ಲ. ದೇಶದ ಹೆಮ್ಮೆಯ ಮತ್ತು ಸಂಭ್ರಮದ ಪ್ರತೀಕ ಸಹ. ಅವಸರದ ನಿರ್ಧಾರ ಕೈಗೊಳ್ಳಬಾರದೆಂದು ಕುಸ್ತಿಪಟುಗಳಿಗೆ ಮನವಿ ಮಾಡುತ್ತೇವೆ. ಅವರ ಸಮಸ್ಯೆಗಳು ಬಗೆಹರಿಯಲಿ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಪಿಲ್‌ ದೇವ್‌ ನೇತೃತ್ವದ ತಂಡ 1983ರ ಜೂನ್‌ನಲ್ಲಿ ಏಕದಿನ ವಿಶ್ವ ಚಾಂಪಿಯನ್‌ ಆಗಿತ್ತು. ಸುನೀಲ್ ಗಾವಸ್ಕರ್‌ ಮೊಹಿಂದರ್ ಅಮರನಾಥ್ ಕೆ.ಶ್ರೀಕಾಂತ್ ಸೈಯ್ಯದ್ ಕೀರ್ಮಾನಿ ಯಶಪಾಲ್ ಶರ್ಮಾ ಮದನ್‌ ಲಾಲ್ ಬಲ್ವಿಂದರ್ ಸಿಂಗ್ ಸಂಧು ಸಂದೀಪ್ ಪಾಟೀಲ್ ಕೀರ್ತಿ ಆಜಾದ್ ಮತ್ತು ರೋಜರ್ ಬಿನ್ನಿ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.