ADVERTISEMENT

ಕುಸ್ತಿಪಟುಗಳು ಪದಕ ಹಿಂತಿರುಗಿಸಿರುವುದು BJP ಮನೋಭಾವವನ್ನು ತೋರಿಸಿದೆ: ಗೆಹಲೋತ್‌

ಪಿಟಿಐ
Published 23 ಡಿಸೆಂಬರ್ 2023, 5:31 IST
Last Updated 23 ಡಿಸೆಂಬರ್ 2023, 5:31 IST
<div class="paragraphs"><p> ಅಶೋಕ್‌ ಗೆಹಲೋತ್‌</p></div>

ಅಶೋಕ್‌ ಗೆಹಲೋತ್‌

   

ಜೈಪುರ: ಕುಸ್ತಿಪಟುಗಳಾದ ಸಾಕ್ಷಿ ಮಲಿಕ್‌ ಮತ್ತು ಬಜರಂಗ್‌ ಪುನಿಯಾ ಅವರು ಪದಕಗಳನ್ನು ಹಿಂದಿರುಗಿಸಿರುವುದು, ಮಹಿಳೆಯರು ಹಾಗೂ ಅವರ ಸುರಕ್ಷತೆಯ ಬಗ್ಗೆ ಬಿಜೆಪಿಗಿರುವ ಅಸೂಕ್ಷ್ಮತೆಯ ಮನೋಭಾವವನ್ನು ತೋರಿಸಿದೆ ಎಂದು ರಾಜಸ್ಥಾನ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹಲೋತ್‌ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ ಸಾಕ್ಷಿ ಮಲಿಕ್‌ ಅವರ ವಿದಾಯ ಹಾಗೂ ಬಜರಂಗ್‌ ಪುನಿಯಾ ಅವರು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿರುವುದು, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಒದಗಿಸುವ ಬಿಜೆಪಿಯ ಉದ್ದೇಶದ ಬಗ್ಗೆ ಪ್ರಶ್ನೆಯನ್ನು ಎತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಕುಸ್ತಿಪಟುಗಳ ವಿಷಯದಲ್ಲಿ ಬಿಜೆಪಿ ತೋರುತ್ತಿರುವ ದುರುದ್ದೇಶ ಮತ್ತು ಸಂತ್ರಸ್ತರ ಬೇಡಿಕೆಗಳನ್ನು ಕಡೆಗಣಿಸಿರುವುದು ಖಂಡನೀಯ ಹಾಗೂ ದುಃಖಕರ. ಇದು ಮಹಿಳೆಯರ ಸುರಕ್ಷತೆಯ ಬಗ್ಗೆ ಬಿಜೆಪಿ ಹೊಂದಿರುವ ಅಸೂಕ್ಷ್ಮತೆಯನ್ನು ಬಹಿರಂಗಪಡಿಸುತ್ತಿದೆ’ ಎಂದು ಗೆಹಲೋತ್‌ ವಾಗ್ದಾಳಿ ನಡೆಸಿದ್ದಾರೆ.

ಬ್ರಿಜ್‌ ಭೂಷಣ್‌ ಸಿಂಗ್‌ ಅವರ ಆಪ್ತ ಸಂಜಯ್ ಸಿಂಗ್‌ ಅವರನ್ನು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ವಿರೋಧಿಸಿ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಬಜರಂಗ್‌ ಪುನಿಯಾ ಶುಕ್ರವಾರ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ.

ರಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಗುರುವಾರ ದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ಮುಂದೆ ತಮ್ಮ ಕುಸ್ತಿ ಬೂಟುಗಳನ್ನು ಎತ್ತಿ ಮೇಜಿನ ಮೇಲೆ ಇರಿಸುವ ಮೂಲಕ ಕುಸ್ತಿ ಕ್ರೀಡೆಗೆ ಕಣ್ಣೀರ ವಿದಾಯ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.