ADVERTISEMENT

ಕೃತಿಯಲ್ಲಿ ರಾಜಮನೆತನದ ‘ಸಂಬಂಧ’ ಉಲ್ಲೇಖ: ಲೇಖಕನಿಗೆ ಜೀವ ಬೆದರಿಕೆ

ಪಿಟಿಐ
Published 13 ಏಪ್ರಿಲ್ 2025, 13:20 IST
Last Updated 13 ಏಪ್ರಿಲ್ 2025, 13:20 IST
FIR.
FIR.   

ತಿರುವನಂತಪುರ: ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ ಹಾಗೂ ಮಹಿಳೆಯೊಬ್ಬರ ನಡುವೆ ಇದ್ದ ಸಂಬಂಧವನ್ನು ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದ ಲೇಖಕ, ಇತಿಹಾಸಕಾರ ಎಂ.ಜಿ.ಶಶಿಭೂಷಣ್ ಅವರಿಗೆ ಜೀವ ಬೆದರಿಕೆ ಕೇಳಿಬಂದಿದೆ.

ಶಶಿಭೂಷಣ್ ಅವರ ಕೃತಿ ‘ಮಂಜುಪೋಯ ಶಂಕುಮುದ್ರ’ದಲ್ಲಿರುವ ಉಲ್ಲೇಖ ಕುರಿತು ಈಗ ಆಕ್ಷೇಪ ವ್ಯಕ್ತವಾಗಿದೆ. ಜೀವ ಬೆದರಿಕೆ ವ್ಯಕ್ತವಾಗಿರುವ ಸಂಬಂಧ ತಿರುವನಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬೆಳವಣಿಗೆಯಿಂದ ಮಾನಸಿಕ ಒತ್ತಡದಲ್ಲಿರುವ ಲೇಖಕರು, ‘ಹೊಸ ಕೃತಿಯಲ್ಲಿ ಬರೆದಿರುವ ಅಂಶಗಳಿಗೆ ನಾನು ಬದ್ಧನಾಗಿದ್ದೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಫೆಬ್ರುವರಿ ತಿಂಗಳಲ್ಲಿ ಕೃತಿ ಬಿಡುಗಡೆಗೊಂಡಿತ್ತು. ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ, ಅವಿವಾಹಿತ ಶ್ರೀ ಚಿತಿರಾ ತಿರುನಾಳ್‌ ಬಾಲರಮಣವರ್ಮ ಅವರು ಮಹಿಳೆ ಜೊತೆಗೆ ಹೊಂದಿದ್ದರು ಎನ್ನಲಾದ ಸಂಬಂಧ ಕುರಿತು ಈ ಕೃತಿಯಲ್ಲಿ ಉಲ್ಲೇಖವಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯ ಚರ್ಚೆಯಾದ ಹಿಂದೆಯೇ, ನಿರ್ದಿಷ್ಟ ವಿವರವನ್ನು ದಾಖಲಿಸಿದ್ದಕ್ಕೆ ಕಾರಣ, ಅದಕ್ಕಿರುವ ಸಾಕ್ಷ್ಯಗಳನ್ನು ಲೇಖಕರು ತಿಳಿಸಿದ್ದರು. ‘ಬಾಲರಮಣವರ್ಮ ಅವರು ಮಹಿಳೆ ಜೊತೆಗೆ ಹೊಂದಿದ್ದ ಸಂಬಂಧ ಬಹಿರಂಗ ಸತ್ಯವೇ ಆಗಿತ್ತು’ ಎಂದೂ ಹೇಳಿದ್ದರು.

ಆದರೆ, ಕೃತಿಯಲ್ಲಿ ಈ ಅಂಶವನ್ನು ದಾಖಲಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಕೃತಿಯನ್ನು ಹಿಂಪಡೆಯಬೇಕು ಎಂಬ ಬೆದರಿಕೆ ಕೇಳಿಬಂದಿದೆ. ಆದರೆ, ಈ ಎಲ್ಲ ಬೆಳವಣಿಗೆ ಕುರಿತು ರಾಜಮನೆತನದವರು ‌ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.