ADVERTISEMENT

ಯಮುನಾ ನದಿಗೆ ವಿಷ: ಚು.ಆಯೋಗಕ್ಕೆ ಭೇಟಿ ನೀಡಿ ಉತ್ತರ ನೀಡಲಿರುವ ಕೇಜ್ರಿವಾಲ್

ಪಿಟಿಐ
Published 31 ಜನವರಿ 2025, 4:36 IST
Last Updated 31 ಜನವರಿ 2025, 4:36 IST
<div class="paragraphs"><p>ಅರವಿಂದ ಕೇಜ್ರಿವಾಲ್</p></div>

ಅರವಿಂದ ಕೇಜ್ರಿವಾಲ್

   

– ಪಿಟಿಐ ಚಿತ್ರ

ನವದೆಹಲಿ: ಯಮುನಾ ನದಿಯಲ್ಲಿ ವಿಷ ಬೆರೆಸಿರುವ ಆರೋಪದ ಕುರಿತು ಚುನಾವಣಾ ಆಯೋಗ ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಲಿದ್ದಾರೆ.

ADVERTISEMENT

ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಕೇಜ್ರಿವಾಲ್ ಅವರು ಬೆಳಿಗ್ಗೆ 11 ಗಂಟೆಗೆ ಇಸಿ ಕಚೇರಿಗೆ ಭೇಟಿ ನೀಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರು ತಮ್ಮ ಹೇಳಿಕೆಯ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಗುರುವಾರ ಆರೋಪಿಸಿದರು. ಹರಿಯಾಣದಿಂದ ದೆಹಲಿಗೆ ಸರಬರಾಜಾಗುವ ಯಮುನಾ ನೀರಿನಲ್ಲಿ ಹೆಚ್ಚಿನ ಪ್ರಮಾಣದ ಅಮೋನಿಯಾ ಅಂಶವಿದೆ ಎಂದು ಹೇಳಿದ್ದಾರೆ.

ಹರಿಯಾಣದ ಬಿಜೆಪಿ ಸರ್ಕಾರವು ಯಮುನಾ ನೀರಿನಲ್ಲಿ ‘ವಿಷ’ ಬೆರೆಸಿ ದೆಹಲಿಯಲ್ಲಿ ‘ಹತ್ಯಾಕಾಂಡ’ಕ್ಕೆ ಯತ್ನಿಸುತ್ತಿದೆ ಎಂಬ ಅವರ ಆರೋಪದ ಕುರಿತಂತೆ ಉತ್ತರ ಕೋರಿ ಚುನಾವಣಾ ಆಯೋಗವು ಕೇಜ್ರಿವಾಲ್ ಅವರಿಗೆ ಎರಡು ನೋಟಿಸ್‌ ನೀಡಿದೆ.

ನವದೆಹಲಿ ಕ್ಷೇತ್ರದಿಂದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕೇಜ್ರಿವಾಲ್, ಶುಕ್ರವಾರ(ಜ.31) ಬೆಳಿಗ್ಗೆ 11 ಗಂಟೆಯೊಳಗೆ ದೆಹಲಿ ಜಲ ಮಂಡಳಿಯ ಸಿಬ್ಬಂದಿ ಎಂಜಿನಿಯರ್‌ಗಳು, ವಿಷ ಪತ್ತೆಯಾದ ಸ್ಥಳ ಮತ್ತು ವಿಷ ಪತ್ತೆ ಮಾಡುವ ವಿಧಾನದ ವಿವರಗಳನ್ನು ಹಂಚಿಕೊಳ್ಳಲು ಚುನಾವಣಾ ಆಯೋಗ ಸೂಚಿಸಿತ್ತು. ವಿಫಲವಾದರೆ, ಆಯೋಗವು ಸೂಕ್ತ ಕ್ರಮ ತೆಗೆದುಕೊಳ್ಳಲು ಮುಕ್ತವಾಗಿರುತ್ತದೆ ಎಂದು ತಿಳಿಸಲಾಗಿತ್ತು.

ಈ ಕುರಿತು ಚುನಾವಣಾ ಆಯೋಗ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ್ದ ಕೇಜ್ರಿವಾಲ್, ವಿಷಕಾರಿ ನೀರನ್ನು ಜನರು ಸೇವಿಸಲು ಅನುಮತಿ ನೀಡಿದರೆ, ಅದು ಗಂಭೀರವಾದ ಆರೋಗ್ಯ ಅಪಾಯ ಮತ್ತು ಮಾರಣಾಂತಿಕತೆಗೆ ಕಾರಣವಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದರು.

ಅವರ ಉತ್ತರದಿಂದ ಅತೃಪ್ತಿ ವ್ಯಕ್ತಪಡಿಸಿದ್ದ ಆಯೋಗ, ಯಮುನಾ ನದಿಯಲ್ಲಿ ಹೆಚ್ಚಿದ ಅಮೋನಿಯಾದ ವಿಷಯವನ್ನು ನದಿಗೆ ವಿಷ ಹಾಕಿರುವ ಆರೋಪದೊಂದಿಗೆ ಬೆರೆಸಬೇಡಿ ಎಂದು ಹೇಳಿತ್ತು. ಅಲ್ಲದೆ, ವಾಸ್ತವಾಂಶಗಳನ್ನು ಒಳಗೊಂಡ ಉತ್ತರ ನೀಡುವಂತೆ ಮತ್ತೊಂದು ನೋಟಿಸ್ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.